ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕೆಲ ನೌಕರರ ಸಂಘಟನೆಗಳೇ ಸರ್ಕಾರ ಮತ್ತು ನಿಗಮಗಳ ಆಡಳಿತ ಮಂಡಳಿಯೇ ಲಾಸ್‌ನಲ್ಲಿದ್ದೇವೆ ಎಂದು ಬಹಿರಂಗವಾಗಿ ಹೇಳದಿರುವ ವಿಷಯವನ್ನು ಸಿಎಂ ಮುಂದೆ ಹೇಳಿ ನಾವು ನಿಮ್ಮ ಜತೆಗಿದ್ದೇವೆ ಎಂಬ ಹುಂಬತನವನ್ನು ತೋರಿಸುತ್ತಿರುವುದರಿಂದ ನೌಕರರಿಗೆ ಆಗುವ ಲಾಭವೇನು ಎಂಬುವುದು ತಿಳಿಯುತ್ತಿಲ್ಲ.
ಇದನ್ನೆಲ ಗಮನಿಸಿದರೆ ಇವು ಸರ್ಕಾರ ಮತ್ತು ನಿಗಮಗಳ ಆಡಳಿತ ಮಂಡಳಿಯ ಪರ ಕೆಲಸ ಮಾಡುತ್ತಿವೆಯೋ ಇಲ್ಲ ನೌಕರರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆಯೋ ಎಂಬ ಅನುಮಾನ ಮೂಡುತ್ತಿದೆ.
ಹೌದು! ಪ್ರಸ್ತುತ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ನಿಗಮಗಳಿಗೆ ಊಹಿಸಿಕೊಳ್ಳಲಾಗದಷ್ಟು ಆರ್ಥಿಕ ಸಂಪನ್ಮೂಲ ಕ್ರೂಢೀಕರಣವಾಗುತ್ತಿದೆ. ಅಲ್ಲದೆ ಮಹಿಳಾ ಪ್ರಯಾಣಿಕರ ಪ್ರಯಾಣದ ಟಿಕೆಟ್ ದರವನ್ನು ಸರ್ಕಾರವೇ ಕೊಡುತ್ತಿರುವುದರಿಂದ ಇನ್ನಷ್ಟು ಸದೃಢವಾಗುತ್ತಿವೆ ಸಾರಿಗೆ ನಿಗಮಗಳು.
ಈ ಹೊತ್ತಲ್ಲಿ ದಶಕಗಳಿಂದಲೂ ಸಮಸ್ಯೆಯ ಸುಳಿಯಲ್ಲೇ ಸಿಲುಕಿರುವ ನೌಕರರ ಮತ್ತು ಅವರ ಕುಟುಂಬದವರ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ನೌಕರರ ಪರ ಸಂಘಟನೆಗಳು ಸರ್ಕಾರ ಮತ್ತು ಆಡಳಿತ ಮಂಡಳಿಗಳನ್ನು ಎಚ್ಚರಿಸುವ ಮೂಲಕ ನೌಕರರ ಹಿತ ಕಾಯುವ ಕೆಲಸ ಮಾಡಬೇಕು.
ಆದರೆ, ಕೆಲ ಸಂಘಟನೆಗಳ ಪ್ರಮುಖರೆನಿಸಿಕೊಂಡವರು ನೌಕರರ ಸಮಸ್ಯೆ ಈ ರೀತಿ ಇದೆ ಇದನ್ನು ಶೀಘ್ರದಲ್ಲೇ ಬಗೆಹರಿಸಿ ಎಂದು ಮನವಿ ಪತ್ರ ಕೊಡುವ ಬದಲಿಗೆ ನಿಗಮಗಳು ಆರ್ಥಿಕವಾಗಿ ಲಾಸ್‌ನಲ್ಲಿವೆ ಎಂಬುವುದು ನಮಗೆ ಗೊತ್ತು ಈಗಾಗಿ ನಿಮ್ಮ ಹಿಂದೆ ನಾವಿದ್ದೇವೆ ಎಂದು ನೌಕರರಿಗೆ ನಯವಂಚನೆ ಮಾಡುವ ನಿಟ್ಟಿನಲ್ಲಿ ಮತ್ತು ಮುಖ್ಯಮಂತ್ರಿಗಳನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಮನವಿ ಪತ್ರಕೊಟ್ಟು ನೌಕರರಿಗೆ ದ್ರೋಹ ಬಗೆಯಲು ಹೊರಟಿರುವುದು ಎಷ್ಟು ಸರಿ? ಇದರಿಂದ ಯಾರಿಗೆ ಲಾಭವಾಗುತ್ತದೆ.
ಇತ್ತ ನೌಕರರ ಪರವಾಗಿ ಇದ್ದೇವೆ ಎಂದು ತೋರಿಸಿಕೊಳ್ಳುವ ಕೆಲ ಸಂಘಟನೆಗಳ ಮುಖಂಡರೇ ನಿಗಮಗಳ ಆಡಿಟ್ ಮಾಡಿ ಲಾಭ ನಷ್ಟ ಲೆಕ್ಕಹಾಕಿದಂತೆ ನಿಗಮಗಳು ಲಾಸ್‌ನಲ್ಲಿವೆ ಎಂದು ಹೇಳಿಕೆ ನೀಡುತ್ತಾರಲ್ಲ ಅದು ಲಿಖಿತವಾಗಿ ತಿಳಿಸುತ್ತಾರಲ್ಲ ಇವರಿಗೆ ನಾಚಿಕೆ ಆಗುವುದಿಲ್ಲವೇ? ಲಾಭ ನಷ್ಟ ಲೆಕ್ಕಹಾಕುವುದು ಇವರ ಕೆಸವೊ ಇಲ್ಲ ನೌಕರರಿಗೆ ಸರಿಸಮಾನ ವೇತನ ಕೊಡಿಸುವುದು ಇವರ ಕೆಲಸವೊ?
ಈ ಕೆಲ ಸಂಘಟನೆಗಳು ನೌಕರರ ಪರವಾಗಿ ಇವೆ ಎಂದ ಮೇಲೆ ಇವುಗಳ ಕೆಲಸವೇನು? ನೌಕರರಿಗೆ ಆಗುತ್ತಿರುವ ಸಮಸ್ಯೆ ಮತ್ತು ಬೇಡಿಕೆಗಳನ್ನು ಸರ್ಕಾರದ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಯ ಮುಂದೆ ಇಟ್ಟು ಅವುಗಳನ್ನು ಪರಿಹರಿಸಿಕೊಡಬೇಕು ಎಂದು ಕೇಳಬೇಕು. ಅದನ್ನು ಬಿಟ್ಟು ಲಾಸ್‌ನಲ್ಲವೆ ಎಂದು ಇವರೆ ಹೇಳಿದ ಮೇಲೆ ಸರ್ಕಾರವಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ಇವರನ್ನೇ ಪ್ರಶ್ನಿಸುವುದಿಲ್ಲವೇ?
ನೀವೆ ಹೇಳುತ್ತಿದ್ದೀರಿ ನಿಗಮಗಳು ಲಾಸ್‌ನಲ್ಲಿವೆ ಎಂದು ಹೀಗಾಗಿ ನಮಗೆ ಆರ್ಥಕ ತೊಂದರೆ ಇರುವುದರಿಂದ ಸದ್ಯಕ್ಕೆ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಆಗುವುದಿಲ್ಲ ಎಂದು ನೀವೆ ಅರರ್ಥ ಮಾಡಿಕೊಂಡಿದೀರಿ ಅಲ್ಲವೇ ಆದ್ದರಿಂದ ಆರ್ಥಿಕ ಪರಿಸ್ಥಿತಿ ಸರಿಯಾದ ಮೇಲೆ ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನ ಪಡುತ್ತೇವೆ ಎಂದು ಹೇಳುವುದಿಲ್ಲವೇ?
ಈ ರೀತಿಯ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡದೆ ನೌಕರರಿಗೆ ಸಿಗಬೇಕಿರುವ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಯನ್ನು ಹಾಗೂ ನಿವೃತ್ತ ನೌಕರರಿಗೆ ಸಿಗಬೇಕಿರುವ ಈ ಹಿಂಬಾಕಿ ಮತ್ತು ಗ್ರಾಚ್ಯುಟಿಯನ್ನು ಸರಿಯಾದ ಸಮಯಕ್ಕೆ ಅವರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರ ಮತ್ತು ಆಡಳಿತ ಮಂಡಳಿಗೆ ಎಚ್ಚರಿಸುವ ಕೆಲಸ ಮಾಡಿ. ಆಗ ನಿಮ್ಮ ಮೇಲೆ ನಮಗೆ ನಂಬಿಕೆ ಬರುತ್ತದೆ ಅದನ್ನು ಬಿಟ್ಟು ಈ ರೀತಿ ನಡೆದುಕೊಂಡರೆ ಹೇಳ ಹೆಸರಿಲ್ಲಂತೆ ಆಗುತ್ತದೆ ನಿಮ್ಮ ಸಂಘಟನೆಗಳು ಎಂದು ನೌಕರರು ಕಿಡಿಕಾರುತ್ತಿದ್ದಾರೆ.
ಇನ್ನು 2020 ಜನವರಿ 1ರಿಂದ ಬರಬೇಕಿರುವ ಹಿಂಬಾಕಿನ್ನು ಕೊಡುವುದಕ್ಕೆ ಇದು ಸೂಕ್ತ ಸಮಯವಾಗಿದೆ. ಕಾರಣ ಈಗ ಎಲ್ಲ ನಾಲ್ಕೂ ನಿಗಮಗಳ ಸಾರಿಗೆ ಸಂಸ್ಥೆಗಳು ಲಾಭದತ್ತ ಹೆಜ್ಜೆ ಹಾಕಿದ್ದು, ಒಳ್ಳೆ ಆದಾಯ ಬರುತ್ತಿದೆ. ಹೀಗಾಗಿ ಒಂದೇ ಬಾರಿಗೆ ಈ ಎಲ್ಲ 38 ತಿಂಗಳ ಹಿಂಬಾಕಿಯನ್ನು ನೀಡಬೇಕು ಎಂದು ಒತ್ತಾಯ ಮಾಡುವಂತೆ ಕೇಳಬೇಕು ಎಂದು ತಮ್ಮ ಸಂಘನೆಗಳ ಈ ಕೆಲ ಮುಖಂಡರಿಗೆ ನೌಕರರು ಆಗ್ರಹಿಸಿದ್ದಾರೆ.
ಇದಿಷ್ಟೇ ಅಲ್ಲದೆ ಕಳೆದ ಮುಷ್ಕರದ ವೇಳೆ ಪೊಲೀಸ್ ಕೇಸ್ ದಾಖಲಿಸಿ ಸುಖ ಸುಮ್ಮನೆ ನೂರಾರು ನೌಕರರನ್ನು ಕೋರ್ಟ್‌ಗೆ ಅಲೆಸುತ್ತಿರುವುದಕ್ಕೆ ಯಾರು ಕಾರಣ ಎಂಬುವುದು ನಮಗೆ ಗೊತ್ತಿದೆ. ಇನ್ನಾದರೂ ಈ ಬಗ್ಗೆ ಸರ್ಕಾರ ಮತ್ತು ಆಡಳಿತ ಮಂಡಳಿಯ ಜತೆ ಮಾತುಕತೆ ನಡೆಸಿ ನೀವೆ ಸೃಷ್ಟಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ, ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ. ಅದನ್ನು ಬಿಟ್ಟು ಈ ರೀತಿ ತಿಳಿಯಾದ ಕೊಳದಲ್ಲಿ ಕಡ್ಡಿಯಾಡಿಸಿ ನಮ್ಮ ಭವಿಷ್ಯದ ಜತೆ ಚೆಲ್ಲಾಟವಾಡಬೇಡಿ ಎಂದು ಹೇಳಿದ್ದಾರೆ.
ಈವರೆಗೂ ಬಿಎಂಟಿಸಿಯಲ್ಲಿ 80ಕ್ಕೂ ಹೆಚ್ಚು ಮಂದಿ ವಜಾಗೊಂಡಿದ್ದು, ಕೋರ್ಟ್‌ಗೆ ಅಲೆಯುತ್ತಿದ್ದಾರೆ. ನಿಜವಾಗಲು ನಿಮಗೆ ನೌಕರರ ಬಗ್ಗೆ ಕಾಳಜಿ ಇದ್ದರೆ ಈ ವಜಾಗೊಂಡಿರುವ ನೌಕರರನ್ನು ಒಳ ತರುವುದಕ್ಕೆ ಹೋರಾಟ ಮಾಡಿ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಬೇಡಿ. ಕಾರಣ ನೀವು ನೌಕರರ ಪರವಾದ ಸಂಘಟನೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ.
ದಶಕಗಳಿಂದಲೂ ನೌಕರರನ್ನು ಯಾಮಾರಿಕೊಂಡು ಬಂದದಿರುವುದು ಸಾಕು. ಇನ್ನಾದರೂ ನೌಕರರ ಪರ ಸಂಘಟನೆಗಳು ಎಂದು ಹೇಳಿಕೊಳ್ಳುವ ಮಹಾನುಭವರು ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸುವತ್ತ ಮನಸ್ಸು ಮಾಡಿ ಎಂದು ನೌಕರರೆ ಆಗ್ರಹಿಸಿದ್ದಾರೆ.