ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಕೊಡಬೇಕಿರುವ ಹಣವನ್ನು ಸರಿಯಾಗಿ ಬಿಡುಗಡೆ ಮಾಡದೆ ನಿಗಮಗಳನ್ನು ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
ರಾಜ್ಯದ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಜುಲೈ 1ರಿಂದ ಜುಲೈ31ರವರೆಗೂ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಒಟ್ಟು ಟಿಕೆಟ್‌ಮೌಲ್ಯ 456,58,66,115 ರೂ.ಗಳಾಗಿದೆ. ಆದರೆ, ಸರ್ಕಾರ 456,58,66,115 ರೂ.ಗಳನ್ನು ಬಿಡುಗಡೆ ಮಾಡುವ ಬದಲಿಗೆ ಕೇವಲ 294,70,00,000 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ.
ಕಳೆದ ಜೂನ್ 11ರಿಂದ 30ರವರೆಗೆ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಒಟ್ಟಾರೆ 10,54,45,047 ಮಹಿಳೆಯರು ಪ್ರಯಾಣ ಮಾಡಿದ್ದರು. ಅದರ ಟಿಕೆಟ್‌ಮೌಲ್ಯ 2,50,96,43,365 ರೂ.ಗಳಾಗಿತ್ತು. ಆದರೆ, ಸರ್ಕಾರ 2,50,96,43,365 ರೂ.ಗಳನ್ನು ಬಿಡುಗಡೆ ಮಾಡುವ ಬದಲಿಗೆ ಕೇವಲ 1,25,48,21,000 ರೂ.ಗಳನ್ನು ಬಿಡುಗಡೆ ಮಾಡಿತ್ತು. ಅಂದರೆ ಜೂನ್ ತಿಂಗಳ ಬಾಕಿಯೇ ಇನ್ನೂ 125.49 ಕೋಟಿ ರೂ.ಬಾಕಿ ಇದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರ ನೀಡಿಲ್ಲ.
ಅದರಂತೆ ಸರ್ಕಾರ ಜುಲೈ ತಿಂಗಳಲ್ಲಿ 456,58,66,115 ರೂ.ಗಳನ್ನು ಬಿಡುಗಡೆ ಮಾಡುವ ಬದಲಿಗೆ ಕೇವಲ 294,70,00,000 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಅಂದರೆ ಅಂದಾಜು ಇನ್ನೂ 161.89 ಕೋಟಿ ರೂಗಳನ್ನು ಬಾಕಿ ಉಳಿಸಿ ಕೊಂಡಿದೆ. ಜೂನ್ ಮತ್ತು ಜುಲೈ ಈ ಎರಡೂ ತಿಂಗಳುಗಳ ಬಾಕಿಯನ್ನು ಒಟ್ಟಿಗೆ ಸೇರಿಸಿದರೆ ಸುಮಾರು 287.37 ಕೋಟಿ ರೂ.ಗಳನ್ನು ಕೊಡಬೇಕಿದೆ.
ಈ ನಡುವೆ ಇದೇ ಆ.21ರಂದು ಜುಲೈ ತಿಂಗಳಲ್ಲಿ ಉಚಿತ ಪ್ರಯಾಣ ಮಾಡಿದ ಮಹಿಳೆಯ ಟಿಕೆಟ್ ಮೌಲ್ಯದ ಮೇರೆಗೆ ನಾಲ್ಕೂ ನಿಗಮಗಳಿಗೆ ಹಣವನ್ನು ಬಿಡುಗಡೆ ಮಾಡಿದ್ದು, ಅದರಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 172,58,07,235 ರೂ.ಗಳನ್ನು ಬಿಡುಗಡೆ ಮಾಡಬೇಕಿದೆ. ಆದರೆ ಸರ್ಕಾರ ಕೇವಲ 110,76,33,000 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ.
ಅದರಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 81,99,28,032 ರೂ.ಗಳನ್ನು ಬಿಡುಗಡೆ ಮಾಡಬೇಕು, ಆದರೆ ಕೇವಲ 51,31,42,000 ರೂ.ಗಳನ್ನು ಬಿಡುಗಡೆ ಮಾಡಿದೆ. ಇನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು111,84,75,122 ರೂ.ಗಳನ್ನು ಬಿಡುಗಡೆ ಮಾಡಬೇಕು. ಆದರೆ ಈ ಸಂಸ್ಥೆಗೆ 76,51,45,000 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 86,65,18,521 ರೂ.ಗಳ ಬದಲಿಗೆ ಕೇವಲ 56,14,80,000 ರೂ.ಗಳನ್ನಷ್ಟೆ ಬಿಡುಗಡೆ ಮಾಡಿದೆ.
ಹೀಗೆ ತಿಂಗಳು ತಿಂಗಳು ನೂರಾರು ಕೋಟಿ ರೂ.ಗಳನ್ನು ಉಳಿಸಿಕೊಂಡರೆ ಸಾರಿಗೆ ನಿಗಮಗಳ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಂಬಳ ಕೊಡುವುದಕ್ಕೂ ಕಷ್ಟಸಾಧ್ಯವಾಗಲಿದೆ. ಇದರ ಜತೆಗೆ ಬಸ್‌ಗಳಿಗೆ ಡೀಸೆಲ್ ಹಾಕಿಸುವುದಕ್ಕೆ ಎಲ್ಲಿಂದ ಹಣ ತರಬೇಕು ಎಂದು ಸರ್ಕಾರದ ಈ ನಡೆಯಿಂದ ಉನ್ನತ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ.
ಇನ್ನು ಸರ್ಕಾರ ಹೆಚ್ಚುವರಿ ಹಣಕೊಡಬೇಕು. ಅದರೆ, ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವ ಟಿಕೆಟ್ ಮೌಲ್ಯದಲ್ಲೂ ಅರ್ಧಕರ್ಧ ಕಡಿತಮಾಡಿ ಕೊಡುತ್ತಿರುವುದನ್ನು ಕೇಳುವ ಧೈರ್ಯ ಸಾರಿಗೆ ನಿಗಮಗಳ ಎಂಡಿಗಳಿಗೆ ಇಲ್ಲವಾಗಿದೆ. ಇದರಿಂದ ಸರ್ಕಾರ ಕೊಡುತ್ತಿರುವುದನ್ನು ಅಧಿಕಾರಯುತವಾಗಿ ಕೇಳುವ ಬದಲಿಗೆ ಭಿಕ್ಷೆ ಕೊಡುತ್ತಿದೆ ಎಂಬಂತೆ ಅಧಿಕಾರಿಗಳು ಟವೆಲ್ ಒಡ್ಡಿ ತೆಗೆದುಕೊಳ್ಳುತ್ತಿರುವುದು ಏಕೆ ಎಂಬ ಪ್ರಶ್ನೆ ಮೂಡುತ್ತಿದೆ.
ಈ ರೀತಿಯ ಭಿಕ್ಷೆ ನೀಡುವುದನ್ನು ಬಿಟ್ಟು ಮಹಿಳೆಯಯರು ಓಡಾಡಿರುವುದಕ್ಕೆ ತಕ್ಕಂತೆ ಟಿಕೆಟ್‌ಮೌಲ್ಯದ ಹಣವನ್ನು ಸಕಾಲದಲ್ಲಿ ಅದೂ ಕೂಡ ಪೂರ್ತಿ ಪಾವತಿ ಮಾಡಿ ನಿಗಮಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಕೇಳುವ ಧೈರ್ಯ ಯಾವುದೇ ಅಧಿಕಾರಿಗೆ ಇಲ್ಲ, ಹೀಗಾಗಿ ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಿದ್ದು, ನಿಗಮಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುವುದಕ್ಕೆ ಅವರಿಗೆ ಸಲ್ಲಬೇಕಿರುವುದನ್ನು ನ್ಯಾಯಯುತವಾಗಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.