ಬೆಳಗಾವಿ: ವೇತನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಉಪವಾಸವಿದ್ದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸತ್ಯಾಗ್ರಹದ ನೇತೃತ್ವ ವಹಿಸಿರುವ ಚಂದ್ರಶೇಖರ್ ಅವರನ್ನು ಮತ್ತೆ ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ಎದೆನೋವು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ಆಗಿ ಬಂದಿದ್ದ ಚಂದ್ರಶೇಖರ್ ಅವರು ಮತ್ತೆ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದರು. ಹೀಗಾಗಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಅವರಿಗೆ ಉಸಿರಾಟದ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಂದೆಡೆ ಉಪವಾಸ ಸತ್ಯಾಗ್ರಹದಲ್ಲಿ ಅಸ್ವಸ್ಥಗೊಂಡಿದ್ದ ಮತ್ತೊಬ್ಬ ನೌಕರ ಕೃಷ್ಣಗುಡುಗುಡಿ ಅವರಿಗೆ ರಾತ್ರಿ ಚಳಿಜ್ವರ ಕಾಣಿಸಿಕೊಂಡಿದ್ದು, ಅವರು ಸ್ವತಃ ತಾವೇ ಹೋಗಿ ಖಾಸಗಿ ಕ್ಲೀನಿಕ್ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಕೃಷ್ಣಗುಡುಗುಡಿ ಅವರು ಹೃದಯಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರೂ ನೌಕರರಿಗೆ ಸರ್ಕಾರ ಕೊಟ್ಟ ಭರವಸೆಯನ್ನು ಈಡೆರಿಸಬೇಕು ಎಂದು ಕಳೆದ 5ದಿನಗಳಿಂದ ಉಪವಾಸ ಸತ್ಯಾಗ್ರಹದಲ್ಲಿ ಅನ್ನ ಆಹಾರ ಸೇವಿಸದೆ ಹೋರಾಟ ಮಾಡುತ್ತಿದ್ದಾರೆ.
ಇತ್ತ ಇಂದು ಮುಂಜಾನೆ ಎದೆನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ 108 ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದ್ದು, ಅವರ ಉಸಿರಾಟಕ್ಕೆ ಆಮ್ಲಜನಕ (ಆಕ್ಸಿಜನ್) ನೀಡಲಾಗಿದೆ.
ಈ ಎಲ್ಲದರ ನಡುವೆ ಮಾನವೀಯತೆಯನ್ನೇ ಮರೆತ ಸರ್ಕಾರ ಉಪವಾಸ ನಿರತ ನೌಕರರನ್ನು ಎಬ್ಬಿಸಲು ಮುಂಜಾನೆಯಿಂದಲೇ ಪೊಲೀಸರನ್ನು ಛೂ ಬಿಟ್ಟಿದೆ.
ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಮೀನಮೇಷ ಎಣಿಸುತ್ತಿದೆ. ಜತೆಗೆ ಪೊಲೀಸರನ್ನು ಬಿಟ್ಟು ನಮ್ಮನ್ನು ಎಬ್ಬಿಸಲು ಯತ್ನಿಸುತ್ತಿದೆ. ಆದರೆ ನಮ್ಮ ಪ್ರಾಣಹೋದರೂ ಸರಿಯೇ ನಾವು ಬೇಡಿಕೆ ಈಡೇರುವವರೆಗೂ ಸ್ಥಳಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ನೌಕರರು ಪಟ್ಟು ಹಿಡಿದು ಕುಳಿತ್ತಿದ್ದಾರೆ.
ಇನ್ನು ಸತ್ಯಾಗ್ರಹ ನಿರತ ಟೆಂಟ್‌ಗೆ ಹೋಗಲು ನೌಕರರಿಗೆ ಪೊಲೀಸರು ಅಡ್ಡಿಪಡಿಸುತ್ತಿರುವುದರಿಂದ ಅವರು ಟೆಂಟ್ ಹೊರಗಡೆಯೇ ಕುಳಿತು ಹೋರಾಟ ಮಾಡುತ್ತಿದ್ದಾರೆ.
ಸಾರಿಗೆಯ ಮಹಿಳಾ ಸಿಬ್ಬಂದಿ ನಾವು ಚಳಿಯಲ್ಲಿ ನಡುಗುತ್ತ ಕುಳಿತಿದ್ದರೂ ನಿಮ್ಮ ಮನಸ್ಸು ಕರಗಿಲ್ಲವೇ? ನಿಮ್ಮ ಮನೆಯ ಹೆಣ್ಣುಮಗಳೊಬ್ಬಳು ಈ ರೀತಿ ಕುಳಿತಿದ್ದರೆ ನಿಮಗೆ ಏನನಿಸುತ್ತಿತ್ತು ಎಂದು ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರ ನಡೆಯ ವಿರುದ್ಧ ಕಿಡಿಕಾರಿದ್ದಾರೆ.