ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಮುಖ್ಯ ಕಾನೂನು ಸಲಹೆಗಾರರ ಹುದ್ದೆಗೆ ಸುಪ್ರೀಂ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ರಾಜೀನಾಮೆ ನೀಡಿದ್ದಾರೆ.
ಸಂಘದ ಆಡಳಿತ ಮಂಡಳಿ ಕೂಡ ವಕೀಲರ ರಾಜೀನಾಮೆಯನ್ನು ನವೆಂಬರ್ 5ರಂದು ಅಂಗೀಕರಿಸಿದೆ. ಈ ಮೂಲಕ ಕಳೆದ ನಾಲ್ಕು ವರ್ಷದಿಂದ ಇದ್ದ ಸಾರಿಗೆ ನೌಕರರ ಮತ್ತು ವಕೀಲರ ನಡುವಿನ ಒಡನಾಟ ಅಂತ್ಯಗೊಂಡಂತಾಗಿದ್ದು, ಇನ್ನು ಮುಂದೆ ಯಾವುದೇ ನೌಕರರ ಪ್ರಕರಣವನ್ನು ಉಚಿತವಾಗಿ ನಡೆಸುವುದಿರಲು ತೀರ್ಮಾನಿಸಿದ್ದಾರೆ.
ಇತ್ತೀಚೆಗಷ್ಟೇ ಸಂಘದ ಕೆಲ ಪದಾಧಿಕಾರಿಗಳು ಮತ್ತು ಸದಸ್ಯರು ವಕೀಲರ ಬಗ್ಗೆ ಸಾಮಾಜಿ ಜಾಲತಾಣದಲ್ಲಿ ಅವಹೇಳನಕಾರಿಯಾದ ಆಡಿಯೋಗಳನ್ನು ಹರಿಯಬಿಟ್ಟಿದ್ದರು. ಈ ವೇಳೆ ವಕೀಲರಿಂದ ನಮಗೆ ಯಾವುದೇ ಪ್ರಯೋಜನಾವಗಿಲ್ಲ ಎಂದೆಲ್ಲ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಎಲ್ಲ ಬೆಳವಣಿಗೆಗಳನ್ನು ನೋಡಿದ ವಕೀಲರು ತಾವೇ 2 ವರ್ಷದ ಹಿಂದೆ ಕಟ್ಟಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದಿಂದ ಈಗ ಹೊರ ನಡೆದಿದ್ದಾರೆ. ಇನ್ನು ಮುಂದೆ ಈ ಸಂಘಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ವಿಜಯಪಥಕ್ಕೆ ತಿಳಿಸಿದ್ದಾರೆ.
ಇನ್ನು ಸಂಘದಲ್ಲಿ ಪ್ರಸ್ತುತ ಸುಮಾರು 16 ಸಾವಿರ ಸದಸ್ಯರಿದ್ದು, 21.21 ಲಕ್ಷ ರೂಪಾಯಿ ಸಂಘದ ಬ್ಯಾಂಕ್ ಖಾತೆಯಲ್ಲಿ ಇದೆ. ನಾವು ಕಾನೂನ ಸಲಹೆಗಾರರಾಗಿದ್ದರೂ ಸಂಘದ ಸದಸ್ಯರ ಒಂದು ರೂಪಾಯಿಯೂ ಕೂಡ ದುರ್ಬಳಕೆ ಆಗಬಾರದು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಹೀಗಾಗಿ ಇಂದು 21.21 ಲಕ್ಷ ರೂಪಾಯಿನ್ನು ಉಳಿಸಲು ಸಾಧ್ಯವಾಗಿದೆ.
ಅಲ್ಲದೆ ಸಂಘದ ಕಚೇರಿಗೆ ಮತ್ತು ಕೆಲ ನೌಕರರು ಸದಸ್ಯತ್ವ ಪಡೆಯುವುದಕ್ಕೂ ನಮ್ಮ ಬಳಿ ಹಣವಿಲ್ಲ ಎಂದವರಿಗೆ ನಾನೇ ಸ್ವಂತ ಹಣಹಾಕಿ ಸದಸ್ಯತ್ವ ಮಾಡಿಸಿಕೊಟ್ಟಿದ್ದೇನೆ. ಅದೇ ರೀತಿ ಹೈ ಕೋರ್ಟ್ ಪ್ರಕರಣಗಳಲ್ಲಿ ಕೋರ್ಟ್ ಫೀ ಬಿಟ್ಟರೆ ನನ್ನ ವಕೀಲ ವೃತ್ತಿಗಾಗಿ ಒಂದೇ ಒಂದು ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿಲ್ಲ.
ಇನ್ನು ಕೆಳಹಂತದ ನ್ಯಾಯಾಲಯಗಳಲ್ಲಿ ನೂರಾರು ನೌಕರರಿಗೆ ಉಚಿತವಾಗಿ ಬೇಲ್ ಮಾಡಿಸಿಕೊಟ್ಟಿದ್ದೇನೆ. ಅಲ್ಲದೆ ಹಲವರ ಪ್ರಕರಣಗಳಲ್ಲಿ ಉಚಿತವಾಗಿ ವಕಾಲತ್ತು ವಹಿಸಿದ್ದೇನೆ. ಇಷ್ಟೆಲ್ಲ ಮಾಡಿದರೂ ನನ್ನ ಮೇಲೆ ಕೆಲವರು ಅಪಪ್ರಚಾರ ಮಾಡಿದರು ಇದರಿಂದ ಬೇಸತ್ತು ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಶಿವರಾಜು ತಿಳಿಸಿದರು.