ಮೈಸೂರು: ಪಠ್ಯ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯೂ ಮೂಡಲಿ ಎಂದು ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ಯಶ್ ಜೋಷಿ ಹೇಳಿದ್ದಾರೆ.
ಸಿದ್ಧಾರ್ಥನಗರದ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಭಕ್ತಿ ಎಂಬುದು ನೌಕರಿಗೆ ಸೇರುವ ಹಂತದಲ್ಲಿ ಬರುವುದಿಲ್ಲ. ಎಳೆವೆಯಲ್ಲೇ ಮೂಡಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹು ದೊಡ್ಡದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಚಟುವಟಿಕೆ, ಸೇವಾ ಮನೋಭಾವ, ಪ್ರಕೃತಿ ಸಂರಕ್ಷಣೆ ಮುಂತಾದವು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತವೆ. ಇದನ್ನು ರೂಢಿಸುತ್ತಿರುವ ಕೇಂದ್ರೀಯ ವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದರು.
ಪ್ರಾಚಾರ್ಯ ಬಿ. ಬಿನಾಯ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಚಟುವಟಿಕೆ ವಿಭಾಗ ಮುಖ್ಯಸ್ಥ ವೈ.ಆರ್. ರಘು, ಎನ್‌ಸಿಸಿ ಅಧಿಕಾರಿ ಸುಮಾಲಿನಿ, ಶಿಕ್ಷಕರಾದ ವಿಜಯ ನಾರಸಿಂಹ, ನಚಿಕೇತ ಮತ್ತಿತರರಿದ್ದರು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಮೂಹ ನೃತ್ಯ, ಗಾಯನ, ದೇಶಭಕ್ತಿ ಬಿಂಬಿಸುವ ನೃತ್ಯ ರೂಪಕಗಳ ಪ್ರದರ್ಶನ ನಡೆಯಿತು.