
ಬೆಂಗಳೂರು: ಪತಿಯಿಂದ ದೂರಾಗಿ ಇಬ್ಬರು ಮಕ್ಕಳ ಜತೆ ವಾಸಗಿದ್ದ ಮಹಿಳೆಯೊಂದಿಗೆ ಸಲುಗೆ ಬೆಳಸಿಕೊಂಡು ಬಳಿಕ ಆ ಪ್ರೇಯಸಿ ಮತ್ತು ಆಕೆಯ ಪುತ್ರನನ್ನು ಹತ್ಯೆ ಮಾಡಿದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಟಿ.ದಾರಸರಹಳ್ಳಿ ಬಳಿ 2023ರ ಸೆಪ್ಟೆಂಬರ್‌ನಲ್ಲಿ ಅಮ್ಮ ಮತ್ತು 11 ವರ್ಷದ ಮಗನ ಜೋಡಿ ಕೊಲೆ ಮಾಡಿದ ಆರೋಪಿ ಶೇಖಪ್ಪ ಎಂಬಾತನೆ ಶಿಕ್ಷೆಗೆ ಒಳಗಾದ ಅಪರಾಧಿ.
ಈ ಜೋಡಿ ಕೊಲೆ ಆರೋಪಿ ಶೇಖಪ್ಪನಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ನಗರದ ಸಿಸಿಎಚ್ – 51ರ ನ್ಯಾಯಧೀಶರಾದ ಸಂತೋಷ್ ಆದೇಶ ಹೊರಡಿಸಿದ್ದಾರೆ.
ಟಿ.ದಾರಸರಹಳ್ಳಿಯ ನಿವಾಸಿ ನವನೀತ ಹಾಗೂ ಆಕೆಯ ಹನ್ನೊಂದು ವರ್ಷದ ಮಗ ಸಾಯಿ ಸೃಜನ್ ಎಂಬಾತನನ್ನ ಆರೋಪಿ ಶೇಖಪ್ಪ ಕೊಲೆ ಮಾಡಿದ್ದ. ಈ ಸಂಬಂಧ ಬಾಗಲಗುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಇನ್ನು ನವನೀತ ಗಂಡನಿಂದ ಬೇರ್ಪಟ್ಟು ಇಬ್ಬರು ಮಕ್ಕಳ ಜತೆ ವಾಸವಾಗಿದ್ದರು. ಇದೇ ವೇಳೆ, ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಆರೋಪಿ ಶೇಖಪ್ಪನ ಪರಿಚಯವಾಗಿ ಆತ್ಮೀಯತೆ, ಸಲುಗೆ ಬೆಳೆದಿತ್ತು. ಇದರ ನಡುವೆಯೇ ಮತ್ತೊಬ್ಬ ವ್ಯಕ್ತಿ ಜೊತೆ ಮಹಿಳೆ ಓಡಾಡುತ್ತಿದ್ದಳು. ಅದಕ್ಕೆ ಕೋಪಗೊಂಡು ಗಲಾಟೆ ತೆಗೆದು ಮನೆಯಲ್ಲೇ ಚಾಕುವಿನಿಂದ ಚುಚ್ಚಿ ಆರೋಪಿ ಕೊಲೆ ಮಾಡಿದ್ದ.
ತಾಯಿಯನ್ನು ಹತ್ಯೆ ಮಾಡುತ್ತಿರುವುದನ್ನು ನೋಡಿದ್ದ ಆಕೆಯ ಮಗನನ್ನು ಈ ಕಿಡಿಗೇಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಸದ್ಯ ನ್ಯಾಯಾಲಯ ಈಗ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.