ಲಕ್ನೋ: ಮೂರನೇ ಬಾರಿ ಅಧಿಕಾರ ಹಿಡಿಯಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆಯ ಕೊನೆಯದಿನವಾದ ಇಂದು ವಾರಣಾಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ ವಾರಣಾಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಎನ್‌ಡಿಎ ಮಿತ್ರ ಪಕ್ಷದ ನಾಯಕರು, ಬಿಜೆಪಿ ಮುಖ್ಯಮಂತ್ರಿಗಳು ಮೋದಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಮಾಡುವುದಕ್ಕೆ ಮೊದಲು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ನದಿಗೆ ಗಂಗಾ ಆರತಿ ಮಾಡಿದರು. ನಂತರ ವಾರಣಾಸಿ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾರಣಾಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಮೂರನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಿದರು.
ಯಾರೆಲ್ಲಾ ಸಾಥ್?: ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ಯೋಗಿ ಆದಿತ್ಯನಾಥ್, ಏಕನಾಥ್ ಶಿಂಧೆ, ಕಾನ್ರಾಡ್ ಸಂಗ್ಮಾ, ಪ್ರಫುಲ್ ಪಟೇಲ್, ರಾಮದಾಸ್ ಅಠವಾಲೆ, ಹರ್ದೀಪ್ ಪುರಿ, ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ಜಿತನ್ ರಾಮ್ ಮಾಂಝಿ, ಉಪೇಂದ್ರ ಕುಶ್ವಾಹ, ಸಂಜಯ್ ನಿಶಾದ್, ಅನುಪ್ರಿಯಾ ಪಟೇಲ್, ಓಂಪ್ರಕಾಶ್ ರಾಜಭರ್, ಜಯಂತ್ ಚೌಧರಿ, ಅಂಬುಮಣಿ ರಾಮದಾಸ್, ಜಿಕೆ ವಾಸನ್, ದೇವನಾಥನ್ ಯಾದವ್, ತುಶಾರ್ ವೆಲ್ಲಪ್ಪಲ್ಲಿ, ಅತುಲ್ ಬೋರಾ, ಪ್ರಮೋದ್ ಬೋರೋ, ಪಶುಪತಿ ಪಾರಸ್ ಮತ್ತು ಭೂಪೇಂದ್ರ ಚೌಧರಿ ಮೋದಿಗೆ ಸಾಥ್ ನೀಡಿದರು.
ಇಂದೇ ನಾಮಪತ್ರ ಸಲ್ಲಿಸಿದ್ದು ಯಾಕೆ?: ಇಂದು ಗಂಗಾ ಸಪ್ತಮಿ. ಹಿಂದೂಗಳ ಪಾಲಿಗೆ ಪವಿತ್ರವಾದ ದಿನವಾಗಿದೆ. ಗಂಗೆ ಜನಿಸಿದಳು ಎಂಬ ನಂಬಿಕೆಯಿದೆ. ಗಂಗಾ ಸಪ್ತಮಿಯಂದು ಶುಭ ಅಭಿಜಿನ್ ಲಗ್ನದಲ್ಲಿ ಮೋದಿ ನಾಮಪತ್ರ ಸಲ್ಲಿಸುವುದು ಶ್ರೇಯಸ್ಕರ ಎಂದು ಪಂಡಿತ್ ಗಣೇಶ್ವರ್ ಶಾಸ್ತ್ರಿ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಮೋದಿ ನಾಮಪತ್ರ ಸಲ್ಲಿಕೆ ಮಾಡಿದರು. ರಾಮಮಂದಿರ ಲೋಕಾರ್ಪಣೆಗೆ ಮಹೂರ್ತವನ್ನು ಪಂಡಿತ್ ಗಣೇಶ್ವರ್ ಶಾಸ್ತ್ರಿ ನೀಡಿದ್ದರು.
ಚುನಾವಣೆ ಆಗಿರುವುದು – ಆಗಬೇಕಿರುವುದು ಎಲ್ಲೆಲ್ಲಿ: 1 ನೇ ಹಂತದ ಚುನಾವಣೆಗಳು ಏಪ್ರಿಲ್ 19 ರಂದು ನಡೆದಿದ್ದು, ಮಾರ್ಚ್ 27 ರೊಳಗೆ ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 102 ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆದಿದೆ.
ಇನ್ನು 2 ನೇ ಹಂತದ ಚುನಾವಣೆಗಳು ಏಪ್ರಿಲ್ 26 ರಂದು ಮುಗಿದಿದ್ದು, ಅಭ್ಯರ್ಥಿಗಳು ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಿದರು. ಎರಡನೇ ಹಂತವು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 89 ಕ್ಷೇತ್ರಗಳಲ್ಲಿ ಚುನಾವಣೆ ಆಗಿದೆ.
3 ನೇ ಹಂತದ ಚುನಾವಣೆಯು ಮೇ 7 ರಂದು ನಡೆದಿದ್ದು, ಅಭ್ಯರ್ಥಿಗಳ ನಾಮ ಪತ್ರ ಸಲ್ಲಿಕೆಗೆ ಅಂತಿಮ ದಿನಾಂಕ ಏಪ್ರಿಲ್ 19 ಆಗಿತ್ತು. ಮೂರನೇ ಹಂತವು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 94 ಕ್ಷೇತ್ರಗಳಲ್ಲಿ ಮತದಾನವಾಗಿದೆ.
ಇನ್ನು 4 ನೇ ಹಂತದ ಚುನಾವಣೆಯು ಮೇ 13 ರಂದು ಅಂದರೆ ನಿನ್ನೆ ಸೋಮವಾರ 10 ರಾಜ್ಯಗಳ 96 ಕ್ಷೇತ್ರಗಳಿಗೆ ನಡೆದಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನಾಂಕ ಏಪ್ರಿಲ್ 25 ಆಗಿತ್ತು.
5 ನೇ ಹಂತದ ಚುನಾವಣೆಯು ಮೇ 20 ರಂದು ನಡೆಯಲಿದೆ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಮೇ 3 ಗಡುವು ಇತ್ತು. ಈ ಐದನೇ ಹಂತವು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 49 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಅದೇರೀತಿ 6 ನೇ ಹಂತದ ಚುನಾವಣೆಯು ಮೇ 25 ರಂದು ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮೇ 6ರಂದು ಕೊನೆಯದಿನವಾಗಿತ್ತು. ಇನ್ನು ಆರನೇ ಹಂತವು ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 57 ಕ್ಷೇತ್ರಗಳಲ್ಲಿ ನಡೆಯಲಿದೆ.
ಇನ್ನು ಕೊನೆಯ ಹಾಗೂ 7ನೇ ಹಂತದ ಚುನಾವಣೆಯು 2024 ಜೂನ್ 1 ರಂದು ನಡೆಯಲಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಇಂದು (ಮೇ 14) ಕೊನೆಯ ದಿನಾಂಕವಾಗಿದೆ. ಏಳನೇ ಹಂತವು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 57 ಕ್ಷೇತ್ರಗಳಲ್ಲಿ ನಡೆಯಲಿದೆ.