ಮೈಸೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಲೋಕಾಯುಕ್ತ ಪೊಲೀಸರು ಮತ್ತು ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಾಧ್ಯಮಗಳಲ್ಲಿ ಕೇವಲ ವರದಿಯಾಗುತ್ತಿವೆಯೇ ಹೊರತು ಯಾರಿಗೂ ಶಿಕ್ಷೆಯಾಗುತ್ತಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಖಜಾಂಚಿ ಎಂ.ಬಿ.ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕಾಯುಕ್ತ ಪೊಲೀಸರು ಮತ್ತು ಅಧಿಕಾರಿಗಳು ದಾಳಿ ಕೇವಲ ಕುತಂತ್ರದ ನಾಟಕೀಯ ಬೆಳವಣಿಗೆ ಆಗದೆ. ಒಂದು ಲಂಬಾಕ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿದ್ದರೆ ಭ್ರಷ್ಟರಿಗೆ ತಕ್ಕ ಕಠಿಣ ಶಿಕ್ಷೆಯಾಗಿರುವ ಬಗ್ಗೆ ಲೋಕಾಯುಕ್ತ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಆಪ್ತರ ನಿವಾಸದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ಬೆಳ್ಳಿ- ಬಂಗಾರ, ಸ್ಥಿರಾಸ್ತಿ , ಇಷರಾಮಿ ವಾಹನಗಳು ಹಾಗೂ ಹೂಡಿಕೆಗಳ ದಾಖಲೆ ಪತ್ರಗಳನ್ನು ವಶಪಡಿಸಿ ಕೊಳ್ಳುತ್ತಾರೆ. ಆ ಬಳಿಕ ಏನಾಯಿತು ಅವರಿಗೆ ಶಿಕ್ಷೆ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ಸಮಂಜಸವಾದ ಮಾಹಿತಿಯೇ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತ ದಾಳಿ ಹೊಸದೇನಲ್ಲ, ದಾಳಿ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದ್ದರೂ ಸಹ ಭ್ರಷ್ಟಾಚಾರ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಲೋಕಾಯುಕ್ತ ದಾಳಿ ಕೇವಲ ಪ್ರಚಾರಕ್ಕೆ ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದೆ, ಏಕೆಂದರೆ ಲೋಕಾಯುಕ್ತ ಆಥವಾ ಇತರೆ ತನಿಖಾ ಸಂಸ್ಥೆಗಳ ಕಣ್ಣಿಗೆ ಮಣ್ಣು ಎರಚುವ ತಂತ್ರವನ್ನು ಭ್ರಷ್ಟ ಅಧಿಕಾರಿಗಳು ಮತ್ತು ನೌಕರರು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ.
ಅನೇಕ ಭ್ರಷ್ಟ ಅಧಿಕಾರಿಗಳಿಗೆ ಅಧಿಕಾರಸ್ಥರ ಜತೆ ನಂಟು ಇರುವುದರಿಂದ ಆರೋಪಿಗಳು ಪ್ರಭಾವ ಬಳಸಿ ಲೋಕಾಯುಕ್ತರ ತನಿಖೆಯಿಂದ ನಿರಾಶಾದಾಯಕವಾಗಿ ಹೊರ ಬರುತ್ತಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗುವ ಹೊತ್ತಿಗೆ ಈ ಸರ್ಕಾರ ಬಿದ್ದು ಹೊಸ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಬಹುದು ರಾಜಕೀಯ ಮತ್ತು ಹಣದ ಪ್ರಭಾವ ಬೀರಿ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಆರೋಪಿತ ಆಧಿಕಾರಿಗಳನ್ನು ಸರ್ಕಾರವೇ ಮತ್ತೆ ಉನ್ನತ ಹುದ್ದೆಯಲ್ಲಿ ಕೂರಿಸಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಈ ರೀತಿ ಲೋಕಾಯುಕ್ತ ದಾಳಿ ಒಂದು ಪ್ರಹಸನವೋ ಏನೋ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ, ಆದ್ದರಿಂದ ಲೋಕಾಯುಕ್ತರು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಆರೋಪಿ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಚೇತನ್ ಒತ್ತಾಯಿಸಿದ್ದಾರೆ.

Related
