ಅ.14 ರಿಂದ ಮಂಡ್ಯದ ಅಂಬಿಗರಹಳ್ಳೀಲಿ ಮಹಾಕುಂಭಮೇಳ: ಮಹದೇಶ್ವರ ಬೆಟ್ಟದಲ್ಲಿ ಜ್ಯೋತಿ ಯಾತ್ರೆಗೆ ಸಾಲೂರು ಶ್ರೀಗಳಿಂದ ಚಾಲನೆ
ಮಹದೇಶ್ವರ ಬೆಟ್ಟ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 14 ರಿಂದ 16 ರವರೆಗೆ ಮಹಾಕುಂಭಮೇಳ ಪುಣ್ಯಸ್ನಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಜ್ಯೋತಿ ಯಾತ್ರೆಗೆ ಸಾಲೂರು ಶ್ರೀಗಳು ಚಾಲನೆ ನೀಡಿದ್ದಾರೆ. ಈ ಜ್ಯೋತಿ ಯಾತ್ರೆಯು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ತ್ರಿವೇಣಿ ಸಂಗಮ ಸೇರಲಿದೆ.
ಇಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಸಾಲೂರು ಮಠ- ಹನೂರು- ಕುಂತೂರು- ಕೊಳ್ಳೇಗಾಲದ ಮಾರ್ಗವಾಗಿ ಸಂಚರಿಸಿ ತಿ.ನರಸೀಪುರ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ವಾಸ್ತವ್ಯ ಹೂಡಲಿದೆ.
ಅಕ್ಟೋಬರ್ 7ರಂದು ಬೆಳಗ್ಗೆ ನರಸೀಪುರದಿಂದ ಕರೊಹಟ್ಟಿ, ವಾಟಾಳು, ಮೂಗೂರು – ಸಂತೇಮರಳ್ಳಿ -ಯಳಂದೂರು ಇರಸುವಾಡಿ- ಮಸಣಾಪುರ- ಹೊಂಗನೂರು- ರೇಚಂಬಳ್ಳಿ- ಕಾಗಲವಾಡಿ, ಹುರಳಿಬಂಜನಪುರ, ಸರಗೂರು, ಚಂದಕವಾಡಿ, ಕೋಡಿಮೋಳೆ, ರಾಮಸಮುದ್ರ ಮಾರ್ಗವಾಗಿ ಸಂಚರಿಸಿ ಚಾಮರಾಜನಗರ ಸಿದ್ದಮಲ್ಲೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 8ರಂದು ಬೆಳಗ್ಗೆ ಚಾಮರಾಜನಗರದಿಂದ ಗುಂಡ್ಲುಪೇಟೆ- ನಂಜನಗೂಡು -ಸುತ್ತೂರು ಮಠ- ಮಾರ್ಗವಾಗಿ ಸಂಚರಿಸಿ ಸುತ್ತೂರು ಮಠದಲ್ಲಿ ವಾಸ್ತವ್ಯ ಹೂಡಲಿದೆ.
ಅ.9ರಂದು ಬೆಳಗ್ಗೆ ಸುತ್ತೂರು ಮಠದಿಂದ ಅಲತ್ತೂರುಹುಂಡಿ, ಮಾದಯ್ಯನಹುಂಡಿ, ಮಲ್ಲರಾಜಯ್ಯನಹುಂಡಿ, ಮೂಡಳ್ಳಿ, ಹದಿನಾರು, ಮರಿಗೌಡನಹುಂಡಿ, ದೇವಲಾಪುರ, ಚಿಕ್ಕೇಗೌಡನಹುಂಡಿ, ಹೊಸಹುಂಡಿ, ತ್ರಿನೇಶ್ವರ ದೇವಸ್ಥಾನದ ಅರಮನೆ- ಮೈಸೂರು- ಚಾಮುಂಡಿ ಬೆಟ್ಟ- ಲಕ್ಷ್ಮಿಕಾಂತ ದೇವಸ್ಥಾನ-ಒಂಟಿಕೊಪ್ಪಲ್ – ವೆಂಕಟೇಶ್ವರ ದೇವಸ್ಥಾನ- ಚಂದ್ರಮೌಳೇಶ್ವರ ದೇವಸ್ಥಾನ- ಹೆಗ್ಗಡ ದೇವನಕೋಟೆ- ಸರಗೂರು ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಸಂಚರಿಸಿ ಶ್ರೀ ಮಹದೇಶ್ವರ ದೇವಾಲಯ ಭೀಮ ಕೊಲ್ಲಿಯಲ್ಲಿ ವಾಸ್ತವ್ಯ ಹೂಡಲಿದೆ.
ನಂತರ ಅಕ್ಟೋಬರ್ 10 ರಂದು ಬೆಳಗ್ಗೆ ಶ್ರೀ ಮಹದೇಶ್ವರ ದೇವಾಲಯ ಭೀಮ ಕೊಲ್ಲಿಯಿಂದ ಹೆಗ್ಗಡ ದೇವನಕೋಟೆ- ಅಂತರಸಂತೆ – ಬೇಲದ ಕುಪ್ಪೆ ಮಾರ್ಗವಾಗಿ ಸಂಚರಿಸಿ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 11ರಂದು ಬೆಳಗ್ಗೆ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಾಲಯದಿಂದ ಹುಣಸೂರು- ಬೆಟ್ಟದಪುರ- ಮಾರ್ಗವಾಗಿ ಸಂಚರಿಸಿ ಶ್ರೀ ಮಹಾದೇಶ್ವರ ದೇವಾಲಯ ಪಿರಿಯಾಪಟ್ಟಣದಲ್ಲಿ ವಾಸ್ತವ್ಯ ಹೂಡಲಿದೆ.
ಅಕ್ಟೋಬರ್ 12ರಂದು ಬೆಳಗ್ಗೆ ಪಿರಿಯಾಪಟ್ಟಣದಿಂದ ಶಿವನ ದೇವಸ್ಥಾನ- ಪಿರಿಯಾಪಟ್ಟಣ -ಹುಣಸೂರು- ತಿಪ್ಪೂರು -ಸಾಲಿಗ್ರಾಮ -ಕೆ.ಆರ್ ನಗರ- ಎಡತೊರೆ- ಅರ್ಕೇಶ್ವರ ದೇವಸ್ಥಾನ- ಆಲಂಬಾಡಿ ಕಾವಲು- ಅಕ್ಕಿ ಹೆಬ್ಬಾಳು ಮಾರ್ಗವಾಗಿ ಸಂಚರಿಸಿ ಕೆ.ಆರ್ ಪೇಟೆಯಲ್ಲಿ ತಂಗಲಿದೆ. ಅಕ್ಟೋಬರ್ 13 ರಂದು ಬೆಳಗ್ಗೆ ಕೆ.ಆರ್ ಪೇಟೆಯಿಂದ ಮತ್ತಿಘಟ್ಟ -ವಿಠಲಾಪುರ -ಸೋಮನಹಳ್ಳಿ -ಪುರ- ಅಂಬಿಗರಹಳ್ಳಿ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮ ತಲುಪಲಿದೆ.
ಭಕ್ತಾದಿಗಳಿಗೆ ಮಂಡ್ಯ ಜಿಲ್ಲಾಡಳಿತ ಮನವಿ: ಭಕ್ತಾಧಿಗಳು ಜ್ಯೋತಿ ಯಾತ್ರೆಯಲ್ಲಿ ಹಾಗೂ ಅಕ್ಟೋಬರ್ 14 ರಿಂದ 16 ರವರೆಗೆ ಕೆ.ಆರ್.ಪೇಟೆಯ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂಡ್ಯ ಜಿಲ್ಲಾಡಳಿತ ಮನವಿ ಮಾಡಿದೆ.