ಮಂಡ್ಯ: ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರ ನಡೆಗೆ ಇಂದು ಸ್ಪಷ್ಟತೆ ಸಿಕ್ಕಿದೆ. ಅವರು ಬಿಜೆಪಿಯ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಣೆಗೊಂಡು ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ಸುದೀರ್ಘವಾಗಿದ ಸುದ್ದಿಗೋಷ್ಠಿ ನಡೆಸುವ ಮೂಲಕ ಸುದ್ದಿಗೋಷ್ಠಿಯುದ್ದಕ್ಕೂ ಜೆಡಿಎಸ್ ಮತ್ತು ಕುಮಾರಸ್ವಾಮಿ ಅವರ ಹೆಸರು ಹೇಳದೆ ತೀವ್ರವಾಗಿ ವಾಗ್ದಾಳಿ ನಡೆಸಿ, ನಾನು ಎಂದಿಗೂ ಕುಟುಂಬ ರಾಜಕಾರಣ ಮಾಡುವುದಿಲ್ಲ. ನನ್ನ ಮಗ ನಾನು ರಾಜಕೀಯದಲ್ಲಿ ಇರುವವರೆಗೂ ರಾಜಕೀಯಕ್ಕೆ ಬರುವುದಿಲ್ಲ ಎಂದು ತಿಳಿಸಿದರು.
ಇನ್ನು ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಗುರುತಿಸುವಂತೆ ಮಾಡಿರುವ ಮೋದಿ ಅವರು ಮಾಡಿದ್ದಾರೆ ಎಂದು ಹೊಗಳಿದ ಸಂಸದೆ ಬಿಜೆಪಿಗೆ ರಾಜ್ಯದಲ್ಲಿ ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಘೋಷಣೆ ಮಾಡಿದರು.
ಈ ಮೂಲಕ ಅವರು ಸಂಸದರಾಗಿ ಆಯ್ಕೆಯಾದಾಗಿನಿಂದಲೂ ತೆರೆ ಮರೆಯಲ್ಲೇ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದನ್ನು ಈಗ ಘೊಷಣೆ ಮಾಡಿಕೊಳ್ಳುವ ಮೂಲಕ ಬಹಿರಂಗವಾಗಿಯೇ ಬಿಜೆಪಿ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಕಾರಣ ಆವರು ಅಧಿಕೃತವಾಗಿ ಒಬ್ಬ ಪಕ್ಷೇತರ ಸಂಸದೆಯಾಗಿ ಬೇರೆ ಪಕ್ಷಕ್ಕೆ ಸೇರುವುದಕ್ಕೆ ಆಗುವುದಿಲ್ಲ. ಹೀಗಾಗಿ ಪಕ್ಷಕ್ಕೆ ಬೆಂಬಲವನ್ನಷ್ಟೇ ಕೊಡಲು ಸಾಧ್ಯ.
ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ತಾನು ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂಬುದನ್ನು ಪರೋಕ್ಷವಾಗಿ ತೋರಿಸಿಕೊಂಡಂತೆ ಕಾಣುತ್ತಿದ್ದು, ಮಂಡ್ಯದ ಮದ್ದೂರಿನ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಳಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದೇ ಹೇಳಲಾಗುತ್ತಿದೆ.
ಒಟ್ಟಾರೆ ಮಂಡ್ಯದ ಸಂಸದೆಯಾಗಿ ಆಯ್ಕೆಯಾದ ದಿನದಿಂದಲೂ ಜೆಡಿಎಸ್ ಮತ್ತು ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಈಗ ಬಿಜೆಪಿ ಬೆಂಬಲಿಸುವುದಾಗಿ ಘೊಷಿಸುವ ಮೂಲಕ ನನಗೆ ಒಂದು ರಾಷ್ಟ್ರೀಯ ಪಕ್ಷದ ಬೆಂಬಲವಿದೆ, ಹೀಗಾಗಿ ನನ್ನ ಕೈ ಇನ್ನಷ್ಟು ಗಟ್ಟಿಯಾಗಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ನಾಜೂಕಾಗಿಯೇ ತೋರಿಸಿಕೊಂಡರು ಸುಮಲತಾ ಅಂಬರೀಷ್.