ಬೆಂಗಳೂರು: ಕರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿದ ಕೆಎಸ್‌ಆರ್‌ಟಿಸಿ ಚಾಲಕ ಎಂ.ಮಂಜುನಾಥ್ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದಿಂದ ಒಂದು ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಂಸನಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ಸಂಘದ ಸಂಸ್ಥಾಪಕರು ಹಾಗೂ ಕಾನೂನು ಸಲಹೆಗಾರರಾದ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಘೋಷಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಇಂದು (29/01/2023) ಮಧ್ಯಾಹ್ನ 2.15ರ ಸಮಯದಲ್ಲಿ ಶಿರಾ – ನಾಗಪ್ಪನಹಳ್ಳಿ ಗೇಟ್ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾಗ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ ಚಾಲಕ ಮಂಜುನಾಥ್ ಅವರು ಕೂಡಲೇ ಬಸ್ ನಿಲ್ಲಿಸಿ ಓಡಿಹೋಗಿ ಕೆರೆಗೆ ಧುಮುಕಿ ಅವರ ರಕ್ಷಣೆ ಮಾಡಿದ್ದಾರೆ.
ಕರ್ತವ್ಯದ ಮೇಲಿದ್ದಾಗಲೇ ಸಂಸ್ಥೆಯ ಶಿರಾ ಘಟಕದ ಚಾಲಕ ಮಂಜುನಾಥ್ ಅವರು ಹೆಣ್ಣುಮಕ್ಕಳನ್ನು ರಕ್ಷಿಸಿರುವ ಬಗ್ಗೆ ವಿಜಯಪಥ ಆನ್‌ಲೈನ್ ಸುದ್ದಿಮಾಧ್ಯಮದ ಮೂಲಕ ತಿಳಿಯಿತು. ಆ ಚಾಲಕರ ಸಮಯ ಪ್ರಜ್ಞೆಗೆ ಅಭಿನಂದನೆ ಸಲ್ಲಿಸಲೇಬೇಕು.
ಹೀಗಾಗಿ ನಮ್ಮ ಸಂಘದ ವತಿಯಿಂದ ಮಂಜುನಾಥ್ ಅವರಿಗೆ ಒಂದು ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಂಸನಪತ್ರ ನೀಡಲಾಗುವುದು ಎಂದು ವಕೀಲರಾದ ಎಚ್.ಬಿ.ಶಿವರಾಜು ವಿಜಯಪಥಕ್ಕೆ ತಿಳಿಸಿದ್ದಾರೆ.
ರಜೆ ಇರುವ ದಿನ ಮಂಜುನಾಥ್ ಅವರನ್ನು ಸಂಘದ ಕಚೇರಿಗೆ ಕರೆಸಿಕೊಂಡು ಈ ಗೌರವವನ್ನು ಸಲ್ಲಿಸಲಾಗುವುದು. ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು. ಕಾರಣ ಅವರು ಹೋಗುವುದು ಒಂದೆರಡು ನಿಮಿಷ ತಡವಾಗಿದ್ದರೂ ಆ ಇಬ್ಬರು ಹೆಣ್ಣುಮಕ್ಕಳ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು. ಆ ವೇಳೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆರೆಯ ಆಳವನ್ನು ನೋಡದೆ ರಕ್ಷಣೆ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.