NEWSನಮ್ಮರಾಜ್ಯಸಂಸ್ಕೃತಿ

ಇಂದು-ನಾಳೆ ಬೀಡನಹಳ್ಳಿ ಸೇರಿದಂತೆ ಏಳೂರಲ್ಲಿ ಏಕಕಾಲಕ್ಕೆ ಮಾರಿಹಬ್ಬ- ಗ್ರಾಮಗಳಲ್ಲಿ ಸಡಗರ ಸಂಭ್ರಮ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಪ್ರತಿ ವರ್ಷ ಬೀಡನಹಳ್ಳಿ ಸೇರಿದಂತೆ ಏಕಕಾಲಕ್ಕೆ ನಡೆಯುವ ಏಳೂರಿನ ಮಾರಿಹಬ್ಬ ಮಂಗಳವಾರ (ಫೆ.10) ಮತ್ತು ಬುಧವಾರ (ಫೆ.11) ಅಂದರಿ ಇಂದು ನಾಳೆ ಆಯಾಯ ಗ್ರಾಮಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.

ಕಳೆದ 2025ರ ಫೆ.18ರ ಮಂಗಳವಾರ ಹಾಗೂ ಫೆ.19ರ ಬುಧವಾರ ಬೀಡನಹಳ್ಳಿಯಲ್ಲಿ ಮಾರಿಹಬ್ಬದ ಸಂಭ್ರಮ ಇರಲಿಲ್ಲ. ಕಾರಣ ಬೀಡನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರೂ ಆದ ದೇವರಗುಡ್ಡಪ್ಪ ವಯೋಸಹಜವಾಗಿ ನಿಧನರಾಗಿರುವುದರಿಂದ ಹಬ್ಬವನ್ನು ಕಳೆದ ಬಾರಿ ಮಾಡದಂತೆ ಗ್ರಾಮದ ಮುಖಂಡರು ನಿರ್ಧರಿಸಿದ್ದರು.

ಈ ವರ್ಷ ಅಂದರೆ ಇಂದು ನಾಳೆ ಬೀಡನಹಳ್ಳಿ ಸೇರಿದಂತೆ ಉಳಿದ ಮಾಕನಹಳ್ಳಿ, ಬಸವನಹಳ್ಳಿ, ಬನ್ನೂರು, ಬೆಟ್ಟಹಳ್ಳಿ, ಚಾಮನಹಳ್ಳಿ ಮತ್ತು ಅತ್ತಹಳ್ಳಿ ಗ್ರಾಮಗಳಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ತಲಾತಲಾಂತರದಿಂದಲೂ ಏಕಕಾಲಕ್ಕೆ ಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಅದರಂತೆ ಈ ವರ್ಷ ಫೆ. 10 ಮತ್ತು 11ರಂದು ಹಬ್ಬದ ಸಡಗರ ಮನೆ ಮಾಡಿದೆ.

ಹಬ್ಬದ ಅಂಗವಾಗಿ ಇಂದು ಮಂಗಳವಾರ ಆಯಾಯ ಗ್ರಾಮ ದೇವತೆ ಮಾರಮ್ಮನಿಗೆ ವಿಶೇಷ ಮೊದಲ ಪೂಜೆ (ತಂಪು ಸೇವೆ) ಕಾರ್ಯಕ್ರಮ ನೆರವೇರಿಸಲಾಯಿತು. ಈ ಹಿನ್ನೆಲೆಯಲ್ಲಿ ಇಂದು ಗ್ರಾಮದ ಹೆಂಗಳೆಯರು ಬಿಂದಿಗೆಯಲ್ಲಿ ನೀರು ತುಂಬಿಸಿ (ಮೀಸಲು ನೀರು) ಗಂಗೆ ಪೂಜೆ ನೆರವೇರಿಸಿ ಮನೆಗೆ ತೆಗೆದುಕೊಂಡು ಹೋಗುವ ಸಂಭ್ರಮ ನೋಡುವುದೇ ಚಂದ.

ಇನ್ನು ಬುಧವಾರ ಅಂದರೆ ನಾಳೆ ಮುಂಜಾನೆ ಮಡೆ ಊಯುವರು: ಉತ್ತನಹಳ್ಳಿ ಮಾರಮ್ಮನಿಗೆ ಗ್ರಾಮದ ಪ್ರತಿ ಮನೆಯಿಂದ ಒಬ್ಬರಂತೆ ಮುಂಜಾನೆ 4.30ರಲ್ಲಿ ಒಂದೆಡೆ ಸೇರಿ ಮಡೆ ಊಯ್ಯುವರು. (ಹೊಸ ಮಡಿಕೆ, ತಂದು ಅದರಲ್ಲಿ ಅಕ್ಕಿ, ಬೇಳೆ, ಉಪ್ಪು ತಕ್ಕಷ್ಟು ನೀರು ಹಾಕಿ ಅನ್ನಮಾಡುವುದು) ನಂತರ ಈ ಅನ್ನ ಪ್ರಸಾದ ಸಿದ್ಧವಾದ ಮಡಿಕೆಯ ಬಾಯಿಯನ್ನು ಅಡಕೆಯ ಎಲೆ( ಒಡಾಳೆ)ಯಿಂದ ಮುಚ್ಚಿ ಅದನ್ನು ಒಡಾಳೆ ದಾರದಿಂದಲೇ ಕಟ್ಟುತ್ತಾರೆ. ಈ ವೇಳೆ ಜವನ ಬೇವಿನ ಸೊಪ್ಪು ಕಟ್ಟುವ ಮೂಲಕ ಅಲಂಕರಿಸಿ ತಾವು ಮಡೆ ಊಯ್ಯಿದಿರುವ ಮಡಿಕೆಯನ್ನು ಗುರುತು ಹಾಕಿಕೊಂಡು ಬರುತ್ತಾರೆ.

ಮತ್ತೆ ಮಧ್ಯಾಹ್ನನದ ನಂತರ ಗ್ರಾಮದ ಹೆಂಗಳೆಯರು ತಂಬಿಟ್ಟಿನಾರತಿ ಜತೆಗೆ ಹಣ್ಣು ಕಾಯಿ ಭೂಪ ಸಮೇತ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆ ಹೊತ್ತು ಬೀಡನಹಳ್ಳಿ ಗ್ರಾಮದ ರಾಜ ಬೀದಿಗಳ ಮೂಲಕ ಮೆರವಣಿಗೆ ಹೊರಟು ಮಡೆ ಊಯ್ಯಿದಿರುವ ಸ್ಥಳ ತಲುಪುತ್ತಾರೆ.

ಈ ಸ್ಥಳದಲ್ಲಿ ತಮ್ಮ ಮುಂಜಾನೆ ಮಡೆ ಊಯ್ಯಿದಿರುವ ಮಡಿಕೆಯ ಬಳಿ ತಾವು ಮೆರವಣಿಗೆ ಮೂಲಕ ಹೊತ್ತು ತಂದ ತಂಬಿಟ್ಟಿನಾರತಿ ಇಟ್ಟು ಹಣ್ಣು ಮುರಿದು, ಕಾಯಿ ಒಡೆದು ಗಂಧದಕಡ್ಡಿ ಹಚ್ಚಿ ಹೆಂಗಳೆಯರು ಭಕ್ತಿಭಾವದಿಂದ ಪೂಜೆ ನೆರವೇರಿಸುತ್ತಾರೆ.

ಗ್ರಾಮದ ರಾಜ ಬೀದಿಯಲ್ಲಿ ಮೆರವಣಿಗೆ ಹೊರಟ ಪೂಜೆಗಳನ್ನು ಬನ್ನೂರು ಹೆಗ್ಗೆರೆಗೆ ತಂದು ಮತ್ತೆ ಹೂ ಹೊಂಬಾಳೆ ಮಾಡಿದ ಬಳಿಕ ಬೀಡನಹಳ್ಳಿ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳನ್ನು ಹೊತ್ತ ದೇವರ ಗುಡ್ಡಪ್ಪಂದಿರು ಮಡೆ ಊಯ್ಯಿದಿರುವ ಸ್ಥಳಕ್ಕೆ ತಲುಪಿ ಅಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕುವರು. ಬಳಿಕ ಮಡೆಗಳ ಮೇಲೆ ತೀರ್ಥ ಪ್ರೊಕ್ಷಣೆ ಮಾಡುವರು.

ಆ ನಂತರ ಮಡೆ ಊಯ್ಯಿದಿರುವ ಮಡಿಕೆಗಳನ್ನು ಹೊತ್ತು ಮನೆಗಳಿಗಳತ್ತ ಗ್ರಾಮದ ಯುವಕರು ತೆರಳುವರು. ಇನ್ನು ಮನೆ ಬಾಗಿಲ ಬಳಿ ಮಡೆ ಹೊತ್ತವರ ಪಾದಪೂಜೆಯನ್ನು ಅಂದರೆ ಗಂಗೆಯನ್ನೆರೆಯುವ ಮೂಲಕ ದೇವರ ಸ್ವರೂಪಿ ಎಂದು ಮಡೆಯನ್ನು ಮನೆಗೆ ಬರಮಾಡಿಕೊಳ್ಳುವರು. ಆ ಮಡೆ ಪ್ರಸಾದವನ್ನು ಮನೆಯ ಪ್ರತಿ ಸದಸ್ಯರು ಸ್ವೀಕರಿಸುವರು. ಈ ಮೂಲಕ ಮಡೆ ಪ್ರಸಾದ ಪೂರ್ಣಗೊಳ್ಳುವುದು.

Megha
the authorMegha

Leave a Reply

error: Content is protected !!