ಸಮಾನ ವೇತನಕ್ಕೆ ಆಗ್ರಹಿಸಿ ಅ.19ರಂದು ಸಿಎಂ ಮನೆ ಮುಂದೆ ಸಾರಿಗೆ ನೌಕರರ ಬೃಹತ್ ಧರಣಿ ಸತ್ಯಾಗ್ರಹ : ಬಿಎಂಎಸ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇದೇ ಅ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಿ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಜ್ದೂರ್ ಸಂಘ ಒಕ್ಕೂಟದ ಬೆಂಗಳೂರು ಉಪಾಧ್ಯಕ್ಷ ಮಂಜುನಾಥ ಪ್ರಸನ್ನ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ಸಾರಿಗೆ ನೌಕರರ ಹಿತ ದೃಷ್ಟಿಯಿಂದ 1-1-2020ರಂದು ಆಗಿಬೇಕಿದ್ದ ವೇತನ ಪರಿಷ್ಕರಣೆ ಆಗಿಲ್ಲ. ಅಂದರೆ ಕಳೆದ 33 ತಿಂಗಳುಗಳಿಂದ ಆಗಿಲ್ಲ. ಈ ಸಂಬಂಧ ಯಾವುದೇ ಮಾತುಕತೆ ನಡೆಸಲು ಸಹ ಸರ್ಕಾರ ಮತ್ತು ಆಡಳಿತ ಮಂಡಳಿ ಮುಂದಾಗುತ್ತಿಲ್ಲ.
ಹೀಗಾಗಿ ಇದೇ ಅ.19ರಂದು ಸರ್ಕಾರಿ ನೌಕರರಿಗೆ ಸರಿ ಸಮಾನದ ವೇತನವನ್ನು ಸಾರಿಗೆ ನೌಕರರಿಗೆ ಕೊಡಬೇಕು ಎಂದು ಆಗ್ರಹಿಸಿ ಬೃಹತ್ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಅವರ ನೇತೃತ್ವದಲ್ಲಿ ಈ ಧರಣಿ ಆಯೋಜಿಸಲಾಗಿದೆ. ಇದಕ್ಕೆ ನಾಲ್ಕೂ ನಿಗಮಗಳ ಸಮಸ್ತ ನೌಕರರು ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.