ಬೆಂಗಳೂರು: ತಮ್ಮ ಬೇಡಿಕೆ ಈಡೇರಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರು ಬೃಹತ್ ಪ್ರತಿಭಟನೆ ಮಾಡಿ ಸರ್ಕಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ಬಿಎಂಟಿಸಿ & ಕೆಎಸ್ಆರ್ಟಿಸಿ ಸಂಘದ ನೇತೃತ್ವದಲ್ಲಿ ನಗರದ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ “ನಿಧಿ ಆಪ್ಕೆ ನಿಕಟ್”ನಲ್ಲಿ ಪಿಂಚಣಿದಾರರು ಸಮಾವೇಶಗೊಂಡು ಪ್ರತಿಭಟನೆ ಮಾಡಿದರು.
ಪ್ರತಿಭಟನೆ ವೇಳೆ ಶಿಸ್ತು ಮತ್ತು ಶಾಂತಿಗೆ ಹೆಸರಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಇತರೆ ಹತ್ತಾರು ಕಂಪನಿಗಳ ನಿವೃತ್ತರ ನೌಕರರ ಆಕ್ರೋಶದ ಕಟ್ಟೆ ಒಡೆದಿತ್ತು. ಈ ಪ್ರತಿಭಟನೆಯಲ್ಲಿ ಸಮರೋಪಾದಿಯಲ್ಲಿ ಜನಸಾಗರವೇ ನೆರೆದಿತ್ತು. ನಿವೃತ್ತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಚೇರಿ ಆವರಣದಲ್ಲಿ ಅಧಿಕಾರಿಗಳ ವಿರುದ್ಧ ಕೂಗಿದ ಧಿಕ್ಕಾರದ ಘೋಷಣೆ ಮಾರ್ದನಿಸಿತು.
ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಕಾರ್ಯಾಧ್ಯಕ್ಷ ನಂಜುಂಡೇಗೌಡ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಇನ್ನು ಮುಂದೆ ಯಾವುದೇ ಸಬೂಬು ಹೇಳುವಂತಿಲ್ಲ, ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ಇನ್ನೊಂದು ವಾರದಲ್ಲಿ ಪಾರ್ಲಿಮೆಂಟ್ ಚುನಾವಣಾ ಫಲಿತಾಂಶ ಬರಲಿದೆ. ಆದರೆ ನಾವು ಈವರೆಗೂ ನೀಡಿರುವ ಮನವಿ ಪತ್ರಗಳಿಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ನಮ್ಮ ಕನಿಷ್ಠ ಪಿಂಚಣಿ ಬೇಡಿಕೆ ರೂ.7,500/- ಡಿಎ ಹಾಗೂ ವೈದ್ಯಕೀಯ ಸೌಲಭ್ಯ, ಅಶಕ್ತರು ಹಾಗೂ ವಿಧವೆಯರಿಗೆ ರೂ 5,000/- ನೀಡಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ನಡೆಸಿದ ಹೋರಾಟಕ್ಕೂ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.
ಇನ್ನು ನಿವೃತ್ತರು ಧೃತಿಗೆಡುವುದು ಬೇಡ, ಹೊಸ ಸರ್ಕಾರ ರಚನೆಯಾದ ಕೂಡಲೇ ನಮ್ಮ ಎಲ್ಲ ಬೇಡಿಕೆಗಳು ಈಡೇರಿಲ್ಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಅಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ಇಷ್ಟು ವರ್ಷಗಳ ಕಾಲ ನಿರಂತರವಾಗಿ ನಿವೃತ್ತರು ಹೋರಾಟ ನಡೆಸಿದ್ದು, ಇನ್ನು ನಾವು ಗುರಿ ಮುಟ್ಟಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಹೀಗೆ ಇರಲಿ ಎಂದು ಹೇಳಿದರು.
ಎನ್ಎಸಿ ಉಪಾಧ್ಯಕ್ಷ ವೀರಕುಮಾರ್ ಗಡದ್ ಮಾತನಾಡಿ, ನಿವೃತ್ತರ ಬದುಕು ಅತ್ಯಂತ ಅಸಹಾನಿಯವಾಗಿದ್ದು, ಇನ್ನೂ ಕಾಲ ಮಿಂಚಿಲ್ಲ, ನಮ್ಮ ಅಂತಿಮ ಗುರಿ ಮುಟ್ಟಲು, ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಚಂದ್ರಶೇಖರ ಪಾಟಕ್, ಎನ್ಎಸಿ ಉಪಾಧ್ಯಕ್ಷರು, ಉತ್ತರ ಪ್ರದೇಶದ ಗೋರಕ್ ಪುರದಿಂದ ಆಗಮಿಸಿದ್ದು, ಇದುವರೆಗೂ ನಾವು ನಡೆಸಿದ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸಿ, ಜಯ ಸಾಧಿಸಬೇಕು ಎಂದರು.
ಬಳ್ಳಾರಿ ಜಿಲ್ಲಾ ಎನ್ಎಸಿ ಮುಖಂಡರಾದ ಗೋಪಿನಾಥ್ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಪಿಂಚಣಿ ಲೆಕ್ಕಾಚಾರದ ವಿಷಯದಲ್ಲಿ ಕಾನೂನು ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡುವ ಮೂಲಕ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಇಪಿಎಫ್ಒ ಅಧಿಕಾರಿಗಳು ನಮ್ಮ ಮನವಿಪತ್ರವನ್ನು ಸ್ವೀಕರಿಸಿ, ಮ್ಮ ಎಲ್ಲ ಮನವಿ ಪತ್ರಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಈಗಾಗಲೇ ಕಳುಹಿಸಿದ್ದು, ಅದರ ಎಲ್ಲ ವಿವರಗಳನ್ನು ನೀಡುವುದಾಗಿ, ಇಂದಿನ ಮನವಿ ಪತ್ರವನ್ನು ಸಹ ತಮ್ಮ ಉಲ್ಲೇಖದೊಂದಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಡು, ಪದಾಧಿಕಾರಿಗಳಾದ ನಾಗರಾಜು ಹಾಗೂ ರುಕ್ಮೇಶ್ ಸೇರಿದಂತೆ ನೂರಾರು ಮಂದಿ ಇದ್ದರು.