ಬೆಂಗಳೂರು: ಹೆಣ್ಣೂರಿನ ಎಚ್‍ಬಿಆರ್ ಲೇಔಟ್ ಬಳಿ ಮಂಗಳವಾರ ನಡೆದ ಮೆಟ್ರೋ ಪಿಲ್ಲರ್ ದುರಂತಕ್ಕೆ ಸಂಬಂಧಿಸಿದಂತೆ ಪತ್ನಿ, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಪತಿ ಲೋಹಿತ್ ಗೋವಿಂದಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಸಾರಾಂಶ: ನನಗೆ ಇಬ್ಬರು ಮಕ್ಕಳಿದ್ದು ಹೆಂಡತಿ ಮಕ್ಕಳ ಜೊತೆ ಹೊರಮಾವು ಕಲ್ಕರೆಯಲ್ಲಿರೋ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದೀನಿ. ವೃತ್ತಿಯಲ್ಲಿ ನಾನು ನನ್ನ ಹೆಂಡತಿ ಸಿವಿಲ್ ಇಂಜಿನಿಯರಿಂಗ್ ಆಗಿ ಕೆಲಸ ಮಾಡಿಕೊಂಡಿರುತ್ತೇವೆ. ನಮಗೆ 2 ವರ್ಷ ಆರು ತಿಂಗಳ ಸುಶ್ಮಿತಾ ಹಾಗೂ ವಿಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಕೆಲಸಕ್ಕೆ ಹೋಗುವ ಮುನ್ನ ಇಬ್ಬರು ಮಕ್ಕಳನ್ನು ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಬೇಬಿ ಸಿಟ್ಟಿಂಗ್‌ನಲ್ಲಿ ಬಿಟ್ಟು ಕೆಲಸಕ್ಕೆ ಹೋಗ್ತಾ ಇರುತ್ತೇವೆ.
ಪ್ರತಿ ದಿನದಂತೆ ಮಂಗಳವಾರವೂ ಹೀರೋ ಹೊಂಡಾ ಗ್ಲಾಮರ್ ಗಾಡಿಯಲ್ಲಿ ಬೇಬಿ ಸಿಟ್ಟಿಂಗ್‌ಗೆ ಮಕ್ಕಳನ್ನು ಬಿಟ್ಟು ಪತ್ನಿ ತೇಜಸ್ವಿನಿಯನ್ನು ಅಲ್ಲಿಯೇ ಕೆಲಸಕ್ಕೆ ಬಿಟ್ಟು ಹೋಗಲಿಕ್ಕೆ ಹೋಗುತ್ತಾ ಇದ್ದೆ. ಬೆಳಗ್ಗೆ 10 ಗಂಟೆಗೆ ಮನೆ ಬಿಟ್ಟು ಹೆಣ್ಣೂರು ಕ್ರಾಸ್ ಕಡೆಯಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ಹೋಗುತ್ತಿದ್ದೆ. ನಾನು ವಾಹನ ಚಾಲನೆ ಮಾಡುತ್ತಿದ್ದರಿಂದ ಹಿಂದೆ ಮಗಳು, ಮಗ ಹಾಗೂ ಪತ್ನಿ ಕುತಿದ್ದರು.
ಎಚ್‌ಬಿಆರ್ ಲೇಔಟ್ ಆಕ್ಸಿಸ್ ಬ್ಯಾಂಕ್ ಬಳಿ ನಾವು ಬಂದಾಗ ಮೆಟ್ರೋ ಪಿಲ್ಲರ್ ಒಮ್ಮೆಲೆ ನಮ್ಮ ಮೇಲೆ ಬಿದ್ದಿದೆ. ಘಟನೆಯಲ್ಲಿ ನನ್ನ ಪತ್ನಿ ತೇಜಸ್ವಿನಿ ಹಾಗೂ ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರ ಸಹಾಯದಿಂದ ಪಕ್ಕದಲ್ಲಿದ್ದ ಆಸ್ಪತ್ರೆಗೆ ಎತ್ತಿಕೊಂಡು ಹೋಗಿ ದಾಖಲಿಸಲಾಯಿತು.
ಆದರೆ ಮಗ ಮತ್ತು ಪತ್ನಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಹಾಗಾಗಿ ಘಟನೆಗೆ ಕಾರಣರಾದ ಸೈಟ್ ಇಂಜಿನಿಯರ್ಸ್ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳು, ಮೆಟ್ರೋ ಕಾಮಗಾರಿಯ ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸುವ ಮೂಲಕ ನಮಗೆ ನ್ಯಾಯಕೊಡಿಸಬೇಕು ಎಂದು ಬರೆದಿದ್ದಾರೆ.