ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹೀಗಾಗಿ 48 ಗಂಟೆಯ ಅವಧಿಯಲ್ಲಿ ಕೆಆರ್‌ಎಸ್ ಡ್ಯಾಂಗೆ 5 ಟಿಎಂಸಿ ನೀರು ಹರಿದುಬಂದಿದೆ.
ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಕಳೆದ 48 ಗಂಟೆಯಲ್ಲಿ ಬರೋಬ್ಬರಿ 100 ಅಡಿಗೆ ತಲುಪಿದೆ. ಕೇವಲ 2 ದಿನಗಳಲ್ಲಿ 8 ಅಡಿಯಷ್ಟು ನೀರು ಡ್ಯಾಂಗೆ ಹರಿದು ಬಂದಿದೆ.
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯ 100 ಅಡಿ ನೀರು ತುಂಬಿದ್ದು, ಇದರಿಂದ ರೈತರು ಹರ್ಷಗೊಂಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಮಳೆಯಿಲ್ಲದೇ ಕಂಗಾಲಾಗಿದ್ದ ಸಕ್ಕರೆ ನಾಡಿನ ರೈತರು, ಇದೀಗ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.
ಸದ್ಯ ಡ್ಯಾಂಗೆ 48,025 ಕ್ಯೂಸೆಕ್ ಒಳ ಹರಿವಿದ್ದು, ಇಂದು ಇನ್ನಷ್ಟು ನೀರಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. 49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಕಳೆದ 48 ಗಂಟೆಗಳಲ್ಲಿ 5 ಟಿಎಂಸಿ ನೀರು ಹರಿದುಬಂದಿದ್ದು, ಒಟ್ಟು 22.809 ಟಿಎಂಸಿ ನೀರು ಡ್ಯಾಂನಲ್ಲಿ ಶೇಖರಣೆಯಾಗಿದೆ. ನೀರಿನ ಒಳಹರಿವು ಇದೇ ರೀತಿ ಮುಂದುವರಿದಲ್ಲಿ ಇನ್ನೂ 10 ದಿನಗಳಲ್ಲಿ ಡ್ಯಾಂ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲಿದೆ.
ಹಾರಂಗಿಯಿಂದ 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಕೊಡಗು ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಹಾರಂಗಿ ಜಲಾಶಯದಿಂದ 30,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕುಶಾಲನಗರ ಸುತ್ತಮುತ್ತಲಿನ ಬಡಾವಣೆಗಳತ್ತ ನೀರು ಹರಿದು ಬಂದಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಗರಿಷ್ಠ ಮಟ್ಟ – 124.80 ಅಡಿಗಳು. ಇಂದಿನ ಮಟ್ಟ – 100 ಅಡಿಗಳು. ಗರಿಷ್ಠ ಸಾಂದ್ರತೆ – 49.452 ಟಿಎಂಸಿ. ಇಂದಿನ ಸಾಂದ್ರತೆ – 22.809 ಟಿಎಂಸಿ. ಒಳ ಹರಿವು – 48,025 ಕ್ಯೂಸೆಕ್. ಹೊರ ಹರಿವು – 5,449 ಕ್ಯೂಸೆಕ್ ಇದೆ.