ನ್ಯೂಡೆಲ್ಲಿ: 78 ಲಕ್ಷ ಪಿಂಚಣಿದಾರರ ಪರ ನಿಂತಿರುವ ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿ (ಎನ್ಸಿ) ಹೋರಾಟಕ್ಕೆ ಫಲಸಿಗುವ ಎಲ್ಲ ಮುನ್ಸೂಚನೆಗಳು ಕಾಣಿಸುತ್ತಿವೆ. ಹೀಗಾಗಿ ಅತೀ ಶೀಘ್ರದಲ್ಲೇ ಎಲ್ಲ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ₹7,500 ಪಿಂಚಣಿ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಕೈಗಾರಿಕೆ, ಸಾರ್ವಜನಿಕ ಸಹಕಾರ ಮತ್ತು ಖಾಸಗಿ ವಲಯದ 78 ಲಕ್ಷ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ₹7,500 ಪಿಂಚಣಿ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸ್ವತಃ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿ (ಎನ್ಸಿ) ಶುಕ್ರವಾರ ತಿಳಿಸಿದೆ.
ಇನ್ನು ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಜುಲೈ 31 ಮತ್ತು ಇದೇ ತಿಂಗಳ 1ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಸಮಿತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸಮಿತಿಯ ಪ್ರತಿನಿಧಿಗಳು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ ಎಂದು ಸಮಿತಿ ತಿಳಿಸಿದೆ.
ಸದ್ಯ ಪಿಂಚಣಿದಾರರಿಗೆ ಮಾಸಿಕ ₹1,450 ಪಿಂಚಣಿ ದೊರೆಯುತ್ತಿದೆ. 36 ಲಕ್ಷ ಪಿಂಚಣಿದಾರರು ಕನಿಷ್ಠ ₹1 ಸಾವಿರಕ್ಕಿಂತಲೂ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ಹಾಗಾಗಿ, ಈ ಮೊತ್ತ ಹೆಚ್ಚಿಸಲು ಒತ್ತಾಯಿಸಲಾಗಿದೆ ಎಂದು ತಿಳಿಸಿದೆ.
ಪಿಂಚಣಿ ಹೆಚ್ಚಳದ ಜೊತೆಗೆ ಅದಕ್ಕೆ ಅನುಗುಣವಾಗಿ ತುಟ್ಟಿಭತ್ಯೆ ನೀಡಬೇಕು. ಪಿಂಚಣಿದಾರರು ಮತ್ತು ಅವರ ಪತ್ನಿಯರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಅಶೋಕ್ ರಾವುತ್ ತಿಳಿಸಿದ್ದಾರೆ.
ಇನ್ನು ಈ ಎಲ್ಲ ಭರವಸೆಗಳ ಬಗ್ಗೆ ಹಾಗೂ ಸಚಿವ ಜತೆ ನಡೆದ ಮಾತುಕತೆ ಏನಾಯಿತು ಎಂಬುದರ ಬಗ್ಗೆ ನಿವೃತ್ತರೊಂದಿಗೆ ಚರ್ಚಿಸುವ ಸಲುವಾಗಿ ನಾಳೆ ಅಂದರೆ ಆ.4ರಂದು ಬೆಂಗಳೂರಿನ ಲಾಲ್ಬಾಗ್ನಲ್ಲಿ ಸಭೆಕರೆಯಲಾಗಿದೆ. ಹೀಗಾಗಿ ಎಲ್ಲರೂ ತಪ್ಪದೆ ಸೇರಿ ಅಂದು ಚರ್ಚೆ ಮಾಡಲಿದ್ದೇವೆ ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.