ತಿ.ನರಸೀಪುರ: ಪಟ್ಟಣದ ನಂಜನಗೂಡು ಮುಖ್ಯರಸ್ತೆಯ ಹೆಳವರಹುಂಡಿ ಸಮೀಪ ನನೆಗುದಿಗೆ ಬಿದ್ದಿರುವ ಉಪ್ಪಾರ ಸಮುದಾಯ ಭವನ ಮತ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಅದಕ್ಕೆ ಬೇಕಾಗುವ ಅನುದಾನವನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಾಲೂಕು ಭಗೀರಥ ಉಪ್ಪಾರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಕೇತಹಳ್ಳಿ ಸಿದ್ದಶೆಟ್ಟಿ ತಿಳಿಸಿದ್ದಾರೆ.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಮಾತನಾಡಿದ ಕೇತಹಳ್ಳಿ ಸಿದ್ದಶೆಟ್ಟಿ, ಉಪ್ಪಾರ ಸಮುದಾಯ ಭವನಕ್ಕೆ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು.
ತದ ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪ ಯೋಗಿ ಸಚಿವರಾಗಿದ್ದ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಪುಟ್ಟರಂಗ ಶೆಟ್ಟಿ ಭೂಮಿ ಪೂಜೆ ನೆರವೇರಿಸಿದ್ದರು.
ಆದರೆ, ನಂತರ ಬಂದ ಬಿಜೆಪಿ ಸರ್ಕಾರ ಆ ಹಣವನ್ನು ಹಿಂದಕ್ಕೆ ಪಡೆದ ಕಾರಣ ಕಾಮಗಾರಿ ನನೆಗುದ್ದಿಗೆ ಬಿದ್ದಿತು. ಸದ್ಯ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದ್ದು ಸಚಿವ ಮಹದೇವಪ್ಪ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಕೂಡಿಸುತ್ತೇನೆ ನನ್ನ ಅವಧಿಯಲ್ಲೇ ಭವನವನ್ನು ಉದ್ಘಾಟನೆ ಸಹ ಮಾಡಿಕೂಡುತ್ತೇನೆ ಎಂದಿದ್ದಾರೆ. ಹೀಗಾಗಿ ಗಾಳಿ ಸುದ್ದಿಗೆ ಕಿವಿಗೂಡಬಾರದು ಎಂದು ಸಮುದಾಯದ ಜನರಿಗೆ ಸಿದ್ದಶೆಟ್ಟಿ ಮನವಿ ಮಾಡಿದರು.
ಮುಂದುವರಿದು ಮಾತನಾಡಿದ ಸಿದ್ದಶೆಟ್ಟಿ ಈಗಾಗಲೇ ನಮ್ಮ ಸಮುದಾಯದ ಮುಖಂಡರ ಜತೆ ಸಚಿವ ಮಹದೇವಪ್ಪ ಅವರನ್ನು ಭೇಟಿ ಮಾಡಿ ವಸ್ತು ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದೇವೆ ಸದ್ಯದಲ್ಲೆ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.