ಸಾರಿಗೆ ನೌಕರರಿಗೂ ವೇತನ ಆಯೋಗ ಮಾದರಿ ಅಳವಡಿಕೆ ಭರವಸೆ ಕೊಟ್ಟ ಸಾರಿಗೆ ಸಚಿವ – ಮೌಖಿಕ ಭರವಸೆ ಒಪ್ಪದ ನೌಕರರು
ಬೆಳಗಾವಿ: ಸಾರಿಗೆ ನೌಕರರಿಗೆ ಏಳನೇ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುವ ಹಾಗೂ ವಜಾಗೊಂಡ ನೌಕರರನ್ನು ಯಾವುದೇ ಕಂಡೀಶನ್ ಇಲ್ಲದೆ ಮರು ನೇಮಕ ಮಾಡಿಕೊಳ್ಳುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ನೀಡಿದ ಭರವಸೆಯನ್ನು ಸತ್ಯಾಗ್ರಹ ನಿರತ ನೌಕರರು ಒಪ್ಪದೆ ನಮಗೆ ಲಿಖಿತವಾಗಿ ಭರವಸೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಸರ್ಕಾರಿ ನೌಕರರಿಗೆ ಇರುವಂತೆ ಹುದ್ದೆಗೆ ಸರಿ ಸಮಾನವಾದ ವೇತನವನ್ನು ಸಾರಿಗೆ ನೌಕರರಿಗೂ ಕೊಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಸತ್ಯಾಗ್ರಹ ಮಾಡುತ್ತಿರುವ ಸಾರಿಗೆ ನೌಕರರನ್ನು ಇಂದು ಭೇಟಿ ಮಾಡಿದ ಸಚಿವ ಶ್ರೀರಾಮುಲು ಅವರು ನೌಕರರಿಗೆ ಮತ್ತೆ ಮೌಖಿಕ ಭರವಸೆ ನೀಡಿದರು. ಆದರೆ, ಅವರ ಭರವಸೆಯ ಮಾತುಗಳನ್ನು ನಿರಾಕರಿಸಿದ ನೌಕರರು ಲಿಖಿತ ರೂಪದಲ್ಲಿ ಕೊಡಬೇಕು ಎಂದು ಕೇಳಿದರು.
ಅದಕ್ಕೆ ಸಚಿವರು ಮೌನವಾದರು ಹೀಗಾಗಿ ಈ ಭರವಸೆಗಳು ನಮ್ಮ ನೌಕರರನ್ನು ಹತಾಶಗೊಳಿಸಿದ್ದು ಲಿಖಿತ ಭರವಸೆಗಾಗಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದು, ಕಾಲಮಿತಿ ಹಾಗೂ ಕಳೆದ ಮುಷ್ಕರದ ಸಮಯದಲ್ಲಿ ಉಳಿದೆಲ್ಲ ಸಮಸ್ಯೆಗಳನ್ನು ಲಿಖಿತ ಆದೇಶಗಳ ಮುಖಾಂತರ ನೌಕರರ ಸಮಸ್ಯೆಗಳನ್ನು ಬಗೆಹರಿಸಿ ಸಾರಿಗೆ ನೌಕರರನ್ನು ನೆಮ್ಮದಿ ಜೀವನ ಸಾಗಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ನೌಕರರು ಸಚಿವರ ಮುಂದೆ ಪ್ರಮುಖವಾದ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು.
ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೇ ಈ ಕೂಡಲೇ ಮರು ನೇಮಕ ಮಾಡಿಕೊಳ್ಳುವುದು. ಮುಷ್ಕರದ ಸಮಯದಲ್ಲಿ ಮಾಡಿರುವ ವರ್ಗಾವಣೆ, ಇತರ ಶಿಕ್ಷೆಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೆ ರದ್ದು ಮಾಡುವುದು ಹಾಗೂ ಪೊಲೀಸ್ ಪ್ರಕರಣಗಳನ್ನು ಹಿಂಪಡೆದು ದಿನಾಂಕ; 06/04/2021ರ ಪೂರ್ವದ ಯಥಾಸ್ಥಿತಿಯನ್ನು ಕಾಪಾಡುವುದು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾಲ್ಕು ನಿಗಮಗಳಲ್ಲಿ ಚಾಲ್ತಿಯಲ್ಲಿರುವ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ಚೌಕಾಸಿ ವೇತನ ಪರಿಷ್ಕರಣಾ ಪದ್ಧತಿ ಕೈಬಿಟ್ಟು, ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಿಕೊಂಡು ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡುವುದು.
1992 ರ ನಂತರ, ಇಲ್ಲಿಯವರೆಗೂ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆಗಳು ನಡೆದಿಲ್ಲ. ಆದ್ದರಿಂದ ಈ ಕೂಡಲೆ ಕಡ್ಡಾಯವಾಗಿ ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸಂಘಗಳ ಚುನಾವಣೆ ನಡೆಸುವುದು.
ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಹಾಗೂ ಇತರ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುದ ಯೋಜನೆಯನ್ನು ಈ ಕೂಡಲೆ ಕೈ ಬಿಡುವುದು.
ಸಾರಿಗೆ ಸಂಸ್ಥೆಯ ಎಲ್ಲ ನೌಕರರಿಗೂ ದಿನಾಂಕ: 10/04/2002 ರ ಪೂರ್ವದಲ್ಲಿ ಉಪದಾನ ಪಾವತಿಸುತ್ತಿದ್ದ ನಿಯಮಾವಳಿಯನ್ನು ಪರಿಗಣಿಸಿ ಜಾರಿಗೊಳಿಸುವುದು, 6) ಕಾರ್ಯಸ್ಥಳಗಳಲ್ಲಿ ನೌಕರರು ಕಿರುಕುಳ ರಹಿತ ಮತ್ತು ನೆಮ್ಮದಿಯಾಗಿ ಕರ್ತವ್ಯ ನಿರ್ವಾಹಿಸುವ ವಾತಾವರಣ ಸೃಷ್ಟಿ ಮಾಡಬೇಕು ಎಂಬ ಘೋಷಣೆಗಳನ್ನು ಕೂಗಿದರು.