ಮಂಡ್ಯ: ಓದಿ ಒಳ್ಳೆ ಭವಿಷ್ಯ ರೂಪಿಸಿಕೊಳ್ಳಲೆಂದು ಕಾಲೇಜಿಗೆ ಮಗಳನ್ನು ಕಳುಹಿಸಿದರೆ ಆಕೆ ಅಪ್ರಾಪ್ತ ವಯಸ್ಸಿನಲ್ಲೇ ಪ್ರೇಮ ವಿವಾಹವಾಗಿ ಓಡಿ ಹೋದ್ದರಿಂದ ಮನನೊಂದ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕೆ.ಆರ್.ಪೇಟೆ ತಾಲೂಕಿನ ಬಿ.ಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರಗತಿಪರ ರೈತ ರವಿ (47) ಆತ್ಮಹತ್ಯೆ ಮಾಡಿಕೊಂಡವರು. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಮೃತ ರವಿ ಶವವಿಟ್ಟುಕೊಂಡು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಲೇಜು ವ್ಯಾಸಂಗ ಮಾಡುತ್ತಿದ್ದ ಪುತ್ರಿ ಕಳೆದ ಐದು ದಿನಗಳ ಹಿಂದೆ ಓಡಿಹೋಗಿ ಅದೇ ಗ್ರಾಮದ ಯುವಕನೊಂದಿಗೆ ವಿವಾಹವಾಗಿದ್ದಾಳೆ.
ಮಗಳು ಹದಿಯರೆಯದ ವಯಸ್ಸಿನಲ್ಲೇ ಪ್ರೀತಿಯ ಬಲೆಗೆ ಬಿದ್ದು, ಪ್ರೀತಿಸಿದವನ ಜೊತೆ ಓಡಿ ಹೋಗಿದ್ದಾಳೆ. ಇದರಿಂದ ನನ್ನ ಮರ್ಯಾದೆ ಕಳೆದು ಹೋದಳು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರವಿ ಅವರ ಮಗಳು ಬೂಕನಕೆರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ಆದರೆ, ಓದುವ ಬದಲಿಗೆ ಬಾಚಹಳ್ಳಿ ಗ್ರಾಮದ ಅಭಿ ಎಂಬಾತನ ಪ್ರೀತಿಯ ಬಲೆಗೆ ಬಿದ್ದು ಮನೆ ಬಿಟ್ಟು ಹೋಡಿ ಹೋಗಿದ್ದಾಳೆ.
ರವಿ ತನ್ನ ಮಗಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಬೇಕು ಎಂದುಕೊಂಡಿದ್ದ. ಆದರೆ 18 ವರ್ಷ ತುಂಬುವ ಮೊದಲೇ ಅದೇ ಗ್ರಾಮದಲ್ಲಿ ಮನೆಯಲ್ಲೇ ಇದ್ದ ಅಭಿಯ ಪ್ರೀತಿಯ ಬಲೆಗೆ ಬಿದ್ದು ಓಡಿ ಹೋಗಿರುವುದು ಹೆತ್ತವರಿಗೆ ಆಘಾತ ತಂದಿದೆ. ಈ ಇಬ್ಬರು ಪ್ರೇಮಿಗಳು ಓಡಿ ಹೋದಾಗ ಕೆಆರ್ ಪೇಟೆ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಿದ್ದಾರೆ. ಆದರೆ ಐದು ದಿನವಾದರೂ ಪೊಲೀಸರು ಓಡಿ ಹೋದ ಪ್ರೇಮಿಗಳನ್ನು ಹುಡುಕುವಲ್ಲಿ ಆಸಕ್ತಿ ತೋರಿಸಲಿಲ್ಲ.
ಇತ್ತ ಮಗಳು ಓಡಿ ಹೋಗಿ ತನ್ನ ಮರ್ಯಾದೆ ಕಳೆದಳು ಎಂದು ರವಿ ಮನನೊಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿಗೆ ಮಗಳು ಒಂದು ಕಡೆ ಕಾರಣವಾದರೆ, ಇನ್ನೊಂದು ಕಡೆ ಪೊಲೀಸರ ಬೇಜವಾಬ್ದಾರಿ ಕಾರಣ ಎಂದು ರವಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರವಿಯ ಮೃತದೇಹವನ್ನು ಪೊಲೀಸ್ ಠಾಣೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.
ಬಳಿಕ ಮಂಡ್ಯ ಎಸ್ಪಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ಸಮಾಧಾನಪಡಿಸಿ ರವಿ ಮೃತದೇಹವನ್ನು ಅಂತ್ಯಕ್ರಿಯೆ ಮಾಡಿಕೊಳ್ಳುವಂತೆ ಕೇಳಿಕೊಂಡ ನಂತರ ಪ್ರತಿಭಟನೆ ಹಿಂಪಡೆದರು.