ಬೆಂಗಳೂರು: ಕಳ್ಳತನದ ಬಗ್ಗೆ ಸುಳ್ಳು ಪ್ರಕರಣ ಸೃಷ್ಟಿಸಿ 75 ಲಕ್ಷ ರೂ. ದೋಚಲು ಸಂಚು ರೂಪಿಸಿದ್ದ ಹಾಗೂ 20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಬಿಡದಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಿಡದಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಕೆ. ಶಂಕರ್ ನಾಯಕ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್ಸ್‌ಪೆಕ್ಟರ್ ಶಂಕರ್ ನಾಯಕ್, ಬ್ಯಾಟರಾಯನಪುರ ಠಾಣೆ ಇನ್‌ಸ್ಪೆಕ್ಟರ್ ಆಗಿ ಈ ಹಿಂದೆ ಕೆಲಸ ಮಾಡಿದ್ದರು. ಈ ವೇಳೆ ಅವರು ಈ ಕೃತ್ಯ ಎಸಗಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ, ಕೃತ್ಯದ ಬಗ್ಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರ ದುರ್ಬಳಕೆ ಮಾಡಿಕೊಂಡ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಸುಳ್ಳು ಪ್ರಕರಣ ಸೃಷ್ಟಿಸಿ ಕರ್ತವ್ಯದಲ್ಲಿ ನಂಬಿಕೆ ದ್ರೋಹ ಹಾಗೂ ಭ್ರಷ್ಟಾಚಾರ ಎಸಗಿರುವುದಾಗಿ ಎಸಿಪಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಐಪಿಸಿ 409, 465, 201, 110 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಹಾಗೂ ಲೋಕನಾಥ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ : ಉದ್ಯಮಿ ಹರೀಶ್ ಅವರಿಗೆ ಸೇರಿದ್ದ 75 ಲಕ್ಷ ರೂ.ಗಳನ್ನು ಚಾಲಕ ಸಂತೋಷ್ ಕದ್ದುಕೊಂಡು ಹೋಗಿದ್ದ. ಈ ವಿಚಾರ ಲೋಕನಾಥ್ ಸಿಂಗ್ ಮೂಲಕ ತಿಳಿದುಕೊಂಡಿದ್ದ ಶಂಕರ್ ನಾಯಕ್, ಹರೀಶ್‌ನನ್ನು ಸಂಪರ್ಕಿಸಿದ್ದ. ಆರೋಪಿಯನ್ನು ಹುಡುಕಿಕೊಡಲು 20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳ್ಳತನ ನಡೆದಿದ್ದ ಸ್ಥಳ, ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಇರಲಿಲ್ಲ. ಆದರೂ ಶಂಕರ್ ನಾಯಕ್, ತನ್ನ ಠಾಣೆ ವ್ಯಾಪ್ತಿಯಲ್ಲಿಯೇ ಕಳ್ಳತನ ನಡೆದಿರುವುದಾಗಿ ಸುಳ್ಳು ಪ್ರಕರಣ ಸೃಷ್ಟಿಸಿದ್ದರು. ತಾನೇ ಸಿದ್ಧಪಡಿಸಿದ್ದ ದೂರಿಗೆ ಸ್ನೇಹಿತನಿಂದ ನಕಲಿ ಸಹಿ ಪಡೆದು 2022ರ ಅಕ್ಟೋಬರ್ 12ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದ. ನಂತರ, ಆರೋಪಿಯನ್ನು ಪತ್ತೆ ಮಾ 72 ಲಕ್ಷ ರೂ. ಜಪ್ತಿ ಮಾಡಿದ್ದ.
ಪ್ರಕರಣದ ಬಗ್ಗೆ ಅನುಮಾನಗೊಂಡಿದ್ದ ಅಂದಿನ ಡಿಸಿಪಿ, ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು. ಅಂದಿನ ಎಸಿಪಿ ಕೋದಂಡರಾಮ್, ಪ್ರಕರಣದ ಕಡತಗಳನ್ನು ಮಾತ್ರ ಸುಪರ್ದಿಗೆ ಪಡೆದಿದ್ದರು.
ಜಪ್ತಿ ಮಾಡಿದ್ದ 72 ಲಕ್ಷ ರೂ.ಗಳನ್ನು ಸರ್ಕಾರಿ ಖಜಾನೆಯಲ್ಲಿ ಇರಿಸುವಂತೆ ಶಂಕರ್ ನಾಯಕ್‌ಗೆ ಸೂಚಿಸಿದ್ದರು. ಆದರೆ, ಶಂಕರ್ ನಾಯಕ್ ಅದೇ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರು ಎಂಬ ವಿಚಾರ ಸಹ ದೂರಿನಲ್ಲಿದೆ.
ಬ್ಯಾಟರಾಯನಪುರ ಠಾಣೆಗೆ ವರ್ಗಾವಣೆಗೊಂಡಿದ್ದ ನಿಂಗನಗೌಡ ಪಾಟೀಲ ಅಧಿಕಾರ ಸ್ವೀಕರಿಸಿದ್ದರು. ಜಪ್ತಿ ಹಣವನ್ನು ಅವರ ಸುಪರ್ದಿಗೆ ನೀಡುವಂತೆ ಎಸಿಪಿ ಅವರು ಶಂಕರ್ ನಾಯಕ್‌ಗೆ ಹಲವು ಬಾರಿ ನೋಟಿಸ್ ನೀಡಿದ್ದರು.
ಆದರೆ ಅವರು ಯಾವುದೇ ಹಣ ನೀಡಿರಲಿಲ್ಲ. ಇದರ ನಡುವೆಯೇ ಶಂಕರ್ ನಾಯಕ್, ಹಣವಿದ್ದ ಚೀಲವನ್ನು ಠಾಣೆಯಲ್ಲಿರಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಚೀಲವನ್ನು ಪತ್ತೆ ಮಾಡಿ ಪರಿಶೀಲಿಸಿದಾಗ, ಅದರಲ್ಲಿ 75 ಲಕ್ಷ ರೂ. ಪತ್ತೆಯಾಗಿದೆ ಎಂದು ಎಸಿಪಿ ದೂರಿನಲ್ಲಿ ತಿಳಿಸಿದ್ದಾರೆ.