CRIMENEWSದೇಶ-ವಿದೇಶನಮ್ಮರಾಜ್ಯ

ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ 2,000 ಕೋಟಿ ರೂ. ಲಾಭಗಳಿದ ಶಾಸಕ ವೀರೇಂದ್ರ ಪಪ್ಪಿ: ಇಡಿ ದಾಳಿ ವೇಳೆ ಬಯಲು!

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ಜನಪ್ರತಿನಿಧಿಗಳು ಎಂದರೆ ಸಾಮಾನ್ಯ ಜನರಿಗೆ ಮಾದರಿಯಾಗಿರಬೇಕು. ಆದರೆ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿದ್ದಾರೆಂಬುವುದು ಇಡಿ ದಾಳಿ ವೇಳೆ ಬಯಲಾಗಿದೆ.

ಚಿತ್ರದುರ್ಗ ಕಾಂಗ್ರೆಸ್ ಶಾಸಕ ಹಾಗೂ ಸಿನಿಮಾ ನಟ ದೊಡ್ಡಣ್ಣನ ಅಳಿಯ ವೀರೇಂದ್ರ ಪಪ್ಪಿ ಹಿಂದಿನಿಂದಲೂ ಕ್ಯಾಸಿನೋ ದೊರೆ ಅಂತಾನೇ ಫೇಮಸ್. ಗೋವಾ, ಶ್ರೀಲಂಕಾ ಸೇರಿದಂತೆ ವಿವಿಧೆಡೆಗಳಲ್ಲಿ ಕ್ಯಾಸಿನೋ ನಡೆಸುತ್ತಿರುವ ವೀರೇಂದ್ರ, ನಾವು ಹಿಂದಿನಿಂದಲೂ ಕೋಟ್ಯಾಧೀಶ್ವರರು, ನಮಗೆ ಜನಸಾಮಾನ್ಯರು ಹಾಗೂ ಸರ್ಕಾರದ ಹಣ ಬೇಕಿಲ್ಲ, ನಾನು ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆಂದು 2023ರ ವಿಧಾನಸಭೆ ಚುನಾವಣೆ ವೇಳೆ ಭರ್ಜರಿ ಪ್ರಚಾರ ಗಿಟ್ಟಿಸಿದ್ದರು.

ಚಿತ್ರದುರ್ಗ ಕ್ಷೇತ್ರದಲ್ಲಿ ಹಣದಹೊಳೆ ಹರಿಸಿ ಕಾಂಗ್ರೆಸ್ ಶಾಸಕರಾಗಿ ಗೆದ್ದಿದ್ದಾರೆ. ಆದರೆ ಶಾಸಕ ವೀರೇಂದ್ರ ಹೇಗೆ ಕೋಟ್ಯಾಧಿಪತಿ ಆದ ಅನ್ನೋದನ್ನು ಶಾಸಕರ ತವರೂರಾದ ಚಳ್ಳಕೆರೆ, ಬೆಂಗಳೂರು, ಪಣಜಿ, ಗ್ಯಾಂಗ್ಟಾಕ್, ಜೋಧಪುರ, ಹುಬ್ಬಳ್ಳಿ ಮತ್ತು ಮುಂಬೈ ಸೇರಿದಂತೆ 31 ಕಡೆಗಳಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು ಬಯಲುಮಾಡಿದ್ದು ಅಸಲಿ ಬಂಡವಾಳ ಈಗ ಹೊರಬಿದ್ದಿದೆ.

ಶಾಸಕ ವೀರೇಂದ್ರನ ಅಸಲಿ ಬಂಡವಾಳದ ಬೆನ್ನತ್ತಿರುವ ಇಡಿ ಅಧಿಕಾರಿಗಳು ಅಕ್ರಮವಾಗಿ ಕಿಂಗ್ 567, ರಾಜಾ 567, ಲಯನ್ 567 ಸೇರಿದಂತೆ ಇತ್ಯಾದಿಗಳ ಹೆಸರಿನಲ್ಲಿ ನಡೆಸುತ್ತಿರುವ ಆನ್‌ಲೈನ್ ಬೆಟ್ಟಿಂಗ್ ತಾಣಗಳನ್ನು ಪತ್ತೆ ಮಾಡಿದ್ದಾರೆ. ಅಲ್ಲದೇ ಹಣ ವರ್ಗಾವಣೆಗೆ ವೆಬ್‌ಸೈಟ್, ರೂಟಿಂಗ್ ಮಾಡಲು ಹಲವು ಗೇಟ್‌ವೇಗಳನ್ನು ಬಳಕೆ ಮಾಡಿದ್ದು, ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿರುವ ಅಕ್ರಮವನ್ನು ಬಯಲಿಗೆಳೆದಿದ್ದಾರೆ.

ಈ ದಂಧೆಗೆ ಶಾಸಕ ವೀರೇಂದ್ರ ಪಪ್ಪಿಯ ಸಹೋದರ ತಿಪ್ಪೆಸ್ವಾಮಿ ಪ್ರಮುಖ ಕಿಂಗ್‌ಪಿನ್ ಆಗಿದ್ದು, ದುಬೈನಿಂದ 3 ವ್ಯಾಪಾರ ಘಟಕಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಡೈಮಂಡ್ ಸಾಫ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಹೆಸರಲ್ಲಿ ಶಾಸಕ ವೀರೇಂದ್ರ ಸಹೋದರನಾದ ತಿಪ್ಪೆಸ್ವಾಮಿ ಹಾಗೂ ನಾಗರಾಜ್ ಪುತ್ರ ಪೃಥ್ವಿ ಎನ್. ರಾಜ್, ಅನಿಲ್ ಗೌಡ ಸೇರಿದಂತೆ ಇತರರ ಸಹಭಾಗಿತ್ವದಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದಾರೆ.

ಜತೆಗೆ ಈ ವಹಿವಾಟುಗಳಲ್ಲಿ ಗೇಟ್‌ವೇಗಳು ಮತ್ತು ಟಿಎಸ್‌ಪಿಗಳ ಎಸ್ಕ್ರೊ ಖಾತೆಗಳ ಮೂಲಕವೂ ಆಟಗಾರರ ಹಣದ ಠೇವಣಿ ಮಾಡುತ್ತಿದ್ದು, ಈ ಹಣವನ್ನು ಹವಾಲಾ ವಹಿವಾಟುಗಳು ಸೇರಿದಂತೆ ವಿವಿಧ ರೀತಿಯಲ್ಲಿ ಹೂಡಿಕೆ ಮಾಡಿದ್ದಾರೆಂದು ಇಡಿ ಶೋಧಕಾರ್ಯದಲ್ಲಿ ಬಹಿರಂಗಪಡಿಸಿದೆ. ಇನ್ನು ವೀರೇಂದ್ರ ಪಪ್ಪಿ ಮನೆ ಮೇಲೆ ಆಗಸ್ಟ್ 29ರಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಅಕ್ರಮ ಆನ್‌ಲೈನ್ ಹಾಗೂ ಆಫ್‌ಲೈನ್ ಬೆಟ್ಟಿಂಗ್ ಪ್ರಕರಣದಡಿ ಸಿಕ್ಕಿಂನಲ್ಲಿ ಬಂಧಿಸಿದ್ದರು.

Advertisement

ಬೆಳಗಿನ ಜಾವ 5:30ರಿಂದ ಮಧ್ಯರಾತ್ರಿ 12:45 ರವರೆಗೆ ಪಪ್ಪಿ ಹಾಗೂ ಅವರ ಸಹೋದರರಾದ ತಿಪ್ಪೇಸ್ವಾಮಿ, ನಾಗರಾಜ್ ಮನೆಯಲ್ಲೂ ಸಹ ತೀವ್ರ ಶೋಧ ನಡೆಸಿ ಕೊನೆಗೆ ದಾಖಲೆಯೊಂದಿಗೆ ಅಧಿಕಾರಿಗಳು ವಾಪಸ್ ಹೋಗಿದ್ದರು. ಶಾಸಕರ ಒಡೆತನದಲ್ಲಿ ಗೋವಾದಲ್ಲಿ ನಡೆಯುತ್ತಿರುವ ಕ್ಯಾಸಿನೋ ಹಾಗೂ ಚಿತ್ರದುರ್ಗ ಹಾಗೂ ಬೆಂಗಳೂರು ಮತ್ತು ಸಿಕ್ಕಿಂನಲ್ಲಿರುವ ಮನೆಗಳಲ್ಲೂ ಏಕಕಾಲದಲ್ಲಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳಿಗೆ 12 ಕೋಟಿ ರೂ. ನಗದು, 1 ಕೋಟಿ ವಿದೇಶ ಕರೆನ್ಸಿ, 6 ಕೋಟಿ ಬೆಲೆ ಬಾಳುವ ಚಿನ್ನಾಭರಣ ಮತ್ತು 10 ಕೆಜಿ ಬೆಳ್ಳಿ ಪತ್ತೆಯಾಗಿದೆ.

ಅಲ್ಲದೇ 5 ಐಷಾರಾಮಿ ವಾಹನಗಳನ್ನು ಕೂಡ ಇಡಿ ಅಧಿಕಾರಿಗಳು ಸೀಜ್ ಮಾಡಿದ್ದು, ಶಾಸಕ ಪಪ್ಪಿ ಅವರಿಗೆ ಸೇರಿದ 17 ಬ್ಯಾಂಕ್ ಅಕೌಂಟ್ ಹಾಗೂ 2 ಲಾಕರ್‌ಗಳನ್ನು ಸೀಜ್ ಮಾಡಿದ್ದಾರೆ. ಜತೆಗೆ ವೀರೇಂದ್ರ ಅವರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 40.69 ಕೋಟಿ ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. ಸೇರಿದಂತೆ 55 ಕೋಟಿ ರೂ. ಹಣವನ್ನು ಇಡಿ ಫ್ರೀಜ್ ಮಾಡಿದೆ.

ಒಟ್ಟಾರೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂಬ ಮಾತಿದೆ. ಆದರೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿಯ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆಯಿಂದ ಅಲ್ಪಾವಧಿಯಲ್ಲೇ 2,000 ಕೋಟಿ ರೂ. ಲಾಭಗಳಿಸಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಹವಾಲದಲ್ಲು ತನ್ನ ವಹಿವಾಟು ನಡೆಸಿರುವ ಪರಿಣಾಮ ಇಡಿ ಕಸ್ಟಡಿಯಲ್ಲಿರುವ ವೀರೇಂದ್ರಗೆ ದಿನದಿಂದ ದಿನಕ್ಕೆ ಮತ್ತಷ್ಟು ಸಂಕಷ್ಟ ಎದುರಾಗೋದು ಗ್ಯಾರಂಟಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಇನ್ನು ಶಾಸಕ ವೀರೇಂದ್ರ ಪಪ್ಪಿಯನ್ನು 4 ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇಂದು ಇಡಿ ಕಸ್ಟಡಿ ಅವಧಿ ಅಂತ್ಯಗೊಂಡ ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಪೊಲೀಸ್ ಕಸ್ಟಡಿ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಲು ಕೋರ್ಟ್ ಸೂಚನೆ ಕೊಟ್ಟಿದೆ. ರಾತ್ರಿ 9 ಗಂಟೆವರೆಗೆ ಮಾತ್ರ ವಿಚಾರಣೆ ನಡೆಸುವಂತೆ ಸೂಚಿಸಿದೆ. ಉತ್ತಮ ಆಹಾರ, ವೈದ್ಯಕೀಯ ಸೇವೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆದೇಶ ಕೊಟ್ಟಿದೆ. ಸೆಪ್ಟೆಂಬರ್ 8ರಂದು ಸಂಜೆ 5 ಗಂಟೆಗೆ ಕೋರ್ಟ್ ಮುಂದೆ ಪಪ್ಪಿಯನ್ನು ಹಾಜರುಪಡಿಸಲು ಸೂಚನೆ ನೀಡಿದೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!