ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಕೊರೊನಾ ವೇಳೆ ಕರ್ತವ್ಯ ನಿರ್ವಹಿಸಿ ಹುತಾತ್ಮರಾದ ಸಾರಿಗೆ ನೌಕರರಿಗೆ ಅಂದಿನ ಸರ್ಕಾರ ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದ 30 ಲಕ್ಷ ರೂ. ಕೋವಿಡ್ ಪರಿಹಾರ ಈವರೆಗೂ ಮೃತರ ಕುಟುಂಬಕ್ಕೆ ಸಿಕ್ಕೇಯಿಲ್ಲ.
ಇನ್ನು ಈ ಬಗ್ಗೆ ಅಂದಿನ ಸರ್ಕಾರ ಮತ್ತು ಇಂದಿನ ಸರ್ಕಾರ ಸೇರಿ ನಿಗಮಗಳ ಆಡಳಿತ ಮಂಡಿಳಿ ವರ್ಗಗಳು ಕೂಡ ಮರೆತೆಬಿಟ್ಟಿವೆ. ಇದು ಭಾರಿ ನೋವಿನ ಸಂಗತಿಯಾಗಿದೆ. ಕೊರೊನಾ ವೇಳೆ ಒತ್ತಡಕ್ಕೆ ಸಿಲುಕಿ ಮೈಸೂರಿನ ಮೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದಕ್ಕೆ 50 ಲಕ್ಷ ರೂ. ಪರಿಹಾರಕೊಟ್ಟ ಸರ್ಕಾರ ಜನರ ಸೇವೆ ಮಾಡುತ್ತಲೇ ಕೊರೊನಾಕ್ಕೆ ಬಲಿಯಾದ ಸಾರಿಗೆ ನೌಕರರ ಕುಟುಂಬದವರನ್ನು ಕಡೆಗಣಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತಿದೆ.
ಈ ಬಗ್ಗೆ ಲಜ್ಜೆಗೆಟ್ಟ ಸಾರಿಗೆ ನೌಕರರ ಸಂಘಟನೆಗಳು ಕೂಡ ಈವರೆಗೂ ಒಂದೇ ಒಂದು ಮಾತನ್ನು ಸಹ ಸರ್ಕಾರಕ್ಕಾಗಲಿ ಅಥವಾ ನಿಗಮಗಳ ಆಡಳಿತ ಮಂಡಳಿಗಾಗಲಿ ಕೇಳದೆ ಮೌನವಹಿಸಿರುವುದು ಏಕೆ?. ಕೊರೊನಾ ಮುಗಿದ ಕತೆ ಅಂತ ಕೊರೊನಾದಿಂದ ಮೃತಪಟ್ಟವರ ಕುಟುಂಬವನ್ನು ಕಡೆಸಿದ್ದಾವೆಯೇ ಈ ಸಂಘಟನೆಗಳು?
ನಿಜವಾಗಲು ಈ ಸಂಘಟನೆಗಳಿಗೆ ನೌಕರರ ಸಮಸ್ಯೆ ನೀಗಿಸಬೇಕು. ಕೊರೊನಾಕ್ಕೆ ಬಲಿಯಾದ ನೌಕರರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂಬ ಮನಸ್ಸು ಇದ್ದಿದ್ದರೆ ಈಗಾಗಲೇ ಕೊರೊನಾದಿಂದ ಮೃತಪಟ್ಟ 114ಕ್ಕೂ ಹೆಚ್ಚು ಸಾರಿಗೆ ನೌಕರರ ಕುಟುಂಬಗಳಿಗೆ ಈವರೆಗೂ ಸರ್ಕಾರ ಬಿಡುಗಡೆ ಮಾಡದ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಉಪವಾಸ ಸತ್ಯಾಗ್ರಹ ಕೂರುವ ಮನಸ್ಸು ಮಾಡಬೇಕಿದೆ.
ಇನ್ನು ಗರಿಗರಿಯಾದ ಬಿಳಿ ವಸ್ತ್ರ ಧರಿಸಿ ಫೋಟೋಗಳಿಗೆ ಪೋಸ್ ಕೊಡುವ ಈ ಲಜ್ಜೆಗೆಟ್ಟ ಕೆಲ ಸಾರಿಗೆ ಸಂಘಟನೆಗಳ ಮುಖಂಡರು. ಈ ನೌಕರರ ದೇಣಿಗೆ ಸಂಗ್ರಹಿಸಿ ತಮ್ಮ ಜೇಬು ತುಂಬಿಸಿಕೊಂಡು ನೌಕರರನ್ನು ಬಲಿಪಶುಗಳಾಗಿ ಮಾಡುತ್ತಿದರುವುದು ಈಗಲೂ ನಿಂತಿಲ್ಲ. ಅಂದಮೇಲೆ ಇವರ ಹೋರಾಟ ಏನು ಎಂಬುವುದು ನೌಕರರಿಗೆ ಅರ್ಥವಾಗುತ್ತಿಲ್ಲ.
ನಾವು ನೌಕರರ ಪರ ಇದ್ದೇವೆ ಎಂದು ಹೇಳುವ ಇವರಿಗೆ ನೌಕರರು ಮತ್ತು ಅವರ ಕುಟುಂಬಗಳು ನೆಮ್ಮದಿಯಿಂದ ಅದು ಕಾನೂನಾತ್ಮಕವಾಗಿ ಬರಬೇಕಿರುವ ಸೌಲಭ್ಯಗಳನ್ನು ಪಡೆದು ಜೀವಿಸಲಿ ಎಂಬ ಕಾಳಜಿ ಇದ್ದರೆ ಈಗಲಾದರೂ 114ಕ್ಕೂ ಹೆಚ್ಚು ಕಟುಂಬಗಳಿಗೆ ಕೊರೊನಾ ಪರಿಹಾರ 30 ಲಕ್ಷ ರೂಪಾಯಿಯನ್ನು ಕೊಡಿಸಲು ಮುಂದಾಗಬೇಕು. ಈ ಮೂಲಕ ಮೃತ ನೌಕರರ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕಿದೆ.
ಸಾರಿಗೆ ನೌಕರರ ಮನದಾಳ: ನಮ್ಮ ಸಾರಿಗೆ ಸಂಸ್ಥೆ ನೌಕರರಲ್ಲಿ ಒಂದು ವಿನಂತಿ. ಕಳೆದ 4 ವರ್ಷಗಳ ಹಿಂದೆ ಕೋವಿಡ್ ಎಂಬ ಮಹಾಮಾರಿಗೆ ಪ್ರಯಾಣಿಕರ ಸೇವೆಯೇ ಜನಾರ್ದನ ಸೇವೆ, ದೇವರ ಸೇವೆ ಎಂದು ಕೆಲಸ ಮಾಡಿದಂತಹ ನಮ್ಮ ಸಾರಿಗೆ ನೌಕರರು ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ತಮ್ಮ ಕುಟುಂಬಗಳ ಸಂತೋಷವನ್ನೂ ಬದಿಗಿಟ್ಟು ತಮ್ಮ ಪ್ರಾಣವನ್ನು ಬಲಿದಾನ ಮಾಡಿರುವ ಇಂಥ ಮೃತ ನೌಕರರ ಕುಟುಂಬಕ್ಕೆ ಅನ್ಯಾಯವಾಗಲು ಬಿಡಬಾರದು.
ಮೃತ ನೌಕರರಿಗೆ ಸರ್ಕಾರದ ಆದೇಶದಂತೆ 30 ಲಕ್ಷ ಹಣ ಕೊಡಬೇಕು. ಆದರೆ ಇನ್ನೂ ಕೂಡ ಪ್ರಾಣ ಕಳೆದುಕೊಂಡ ನೌಕರರ ಕುಟುಂಬಕ್ಕೆ ಪರಿಹಾರ ಕೊಡದೆ ಇರುವುದು ತುಂಬ ನೋವಿನ ಸಂಗತಿಯಾಗಿದೆ. ಜೀವಂತವಾಗಿರುವ ನಾವು ಪ್ರಾಣವನ್ನು ಕಳೆದುಕೊಂಡಂತಹ ನಮ್ಮ ಸಹೋದ್ಯೋಗಿಗಳ ಕುಟುಂಬಕ್ಕೆ ಪರಿಹಾರ ಕೊಡಿಸಲು ಪಣತೊಡೋಣ.
ಇದಕ್ಕೆ ನಮ್ಮದೇ ಸಂಘಟನೆಗಳು ಬಲ ತುಂಬುವ ಕೆಲಸ ಮಾಡಬೇಕು. ವೈಯಕ್ತಿ ದ್ವೇಷವನ್ನು ಬದಿಗಿಟ್ಟು ನಾವೆಲ್ಲರೂ ಒಂದಾಗಿ ಸಾಗರದ ಅಲೆಯಂತೆ ನುಗ್ಗೋಣ. ಈಗಾಗಲೇ ಯೋಚನೆಯಲ್ಲೇ 4 ವರ್ಷ ಕಳೆದಿದ್ದೇವೆ ಇನ್ನು ಯೋಚನೆ ಮಾಡಲು ಸಮಯವಿಲ್ಲ. ಹೀಗಾಗಿ ನಾವು ಎಚ್ಚರಗೊಳ್ಳಬೇಕು ಎಂದು ಸಮಸ್ತ ಸಾರಿಗೆ ನೌಕರರು ಹೇಳುತ್ತಿದ್ದಾರೆ.