ಮುಂಬೈ: ಎಂಎಸ್ಆರ್ಟಿಸಿ ಸಂಸ್ಥೆಯನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ಎಂಎಸ್ಆರ್ಟಿಸಿ ನೌಕರರು ಕಳೆದ 77 ದಿನಗಳಿಂದ ನಿರಂತರವಾಗಿ ಮುಷ್ಕರವನ್ನು ನಡೆಸುತ್ತಿದ್ದು, ನೌಕರರ ಮುಷ್ಕರಕ್ಕೆ ಸರ್ಕಾರ ಮುಣಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಹೌದು ! ನೌಕರರ ಬೇಡಿಕೆಗೆ ಸರ್ಕಾರ ಮಣಿಯಲಿದೆ. ನೌಕರರ ಬೇಡಿಕೆಯಂತೆ ಸರ್ಕಾರದೊಂದಿಗೆ ನಿಗಮವನ್ನು ವಿಲೀನಗೊಳಿಸುವುದಕ್ಕೆ ಸರ್ಕಾರದೊಂದಿಗೆ ಮಾತನಾಡುವುದಾಗಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸಾರಿಗೆ ಸಚಿವ ಅನಿಲ್ ಪರಬ್ ಅವರೇ ಭರವಸೆ ನೀಡಿದ್ದು, ಕೆಲಸಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ.
ಎಂಎಸ್ಆರ್ಟಿಸಿ ಸಂಸ್ಥೆಯನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ಎಂಎಸ್ಆರ್ಟಿಸಿ ನೌಕರರು ಕಳೆದ ಅಕ್ಟೋಬರ್ 27 ರಿಂದ ಮುಷ್ಕರ ನಡೆಸುತ್ತಿದ್ದಾರೆ.
ರಾಜ್ಯದ 250 ಬಸ್ ಡಿಪೋಗಳನ್ನು ನವೆಂಬರ್ 9 ರಿಂದ ಇಲ್ಲಿಯವರೆಗೂ ಮುಚ್ಚಲಾಗಿದೆ ಸಾರ್ವಜನಿಕ ಸಾರಿಗೆ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ. ಗ್ರಾಮೀಣ ಭಾಗದ ಸಾರ್ವಜನಿಕರು ಬಸ್ಸೇವೆಯನ್ನು ಅವಲಂಬಿಸಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸಾರಿಗೆ ಸಚಿವ ಅನಿಲ್ ಪರಬ್ ಅವರೊಂದಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಸಭೆ ನಡೆಸಿ ಕಾರ್ಮಿಕರ ಮುಷ್ಕರದ ಕುರಿತು ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಸಾರಿಗೆ ನೌಕರರು ಕೆಲಸ ಪುನರಾರಂಭಿಸುವಂತೆ ಮನವಿ ಮಾಡಿದರು. ಅಲ್ಲದೆ ನೌಕರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯದ ಸಾಮಾನ್ಯ ಜನರ ಜೀವನಾಡಿ ಎಂಎಸ್ಆರ್ಟಿಸಿಯು “ಕಳೆದ ಎರಡು ವರ್ಷಗಳಿಂದ, ಕೋವಿಡ್ -19ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದು ಸಂಸ್ಥೆಯ ಅಸ್ತಿತ್ವದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಸೃಷ್ಟಿಸಿದೆ.
ಇಂತಹ ಪರಿಸ್ಥಿತಿಯಲ್ಲಿ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹಾಗೂ ಅವರ ಭವಿಷ್ಯ ಮತ್ತು ಸಂಸ್ಥೆಗೆ ತೊಂದರೆಯಾಗದಂತೆ ಸಿಬ್ಬಂದಿಗಳು ಕೂಡಲೇ ಕೆಲಸಕ್ಕೆ ಮರಳಬೇಕು” ಎಂದು ಪವಾರ್ ಮನವಿ ಮಾಡಿದರು.
MSRTC ಮುಷ್ಕರವು ಸೋಮವಾರ 76 ನೇ ದಿನಕ್ಕೆ ಕಾಲಿಟ್ಟಿದೆ, 92,666 ಸಿಬ್ಬಂದಿಗಳಲ್ಲಿ 24,000 ಸಿಬ್ಬಂದಿ ಮಾತ್ರ ಕೆಲಸಕ್ಕೆ ವರದಿ ಮಾಡಿದ್ದಾರೆ.