ಬೆಂಗಳೂರು: ಯಶ್ ನಟನೆಯ ಕೆಜಿಎಫ್ ಸಿನಿಮಾದಲ್ಲಿ ಪತ್ರಕರ್ತೆ ದೀಪಾ ಹೆಗಡೆ ಪಾತ್ರ ಮಾಡಿದ್ದ ಮಾಳವಿಕಾ ಅವಿನಾಶ್ ಅವರ ಆಧಾರ್ ಕಾರ್ಡ್ಅನ್ನು ಅಪರಿಚಿತರು ದುರುಪಯೋಗ ಪಡಿಸಿಕೊಂಡು ಮೊಬೈಲ್ ಸಿಮ್ ಖರೀದಿಸಿ ಅದರಲ್ಲಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ ವಿಷಯ ಬಹಿರಂಗವಾಗಿದೆ.
ಈ ಮಾಹಿತಿಯನ್ನು ಸ್ವತಃ ಮಾಳವಿಕಾ ಅವರೇ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಆಧಾರ್ ಕಾರ್ಡ್ ದುರ್ಬಳಕೆ ಆಗಿರುವ ಕುರಿತು ಮಾಹಿತಿ ನೀಡಿರುವ ಅವರು, ನನ್ನ ಹೆಸರಿನಲ್ಲಿ ಅಪರಿಚಿತರು ಸಿಮ್ ಖರೀದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಈ ಖರೀದಿಸಿದ ಸಿಮ್ ಮೂಲಕ ಅಶ್ಲೀಲ ಮೆಸೇಜ್, ವಿಡಿಯೋ ಕಳುಹಿಸುತ್ತಿದ್ದಾರೆ ಎಂದು ಮಾಳವಿಕಾ ಅವಿನಾಶ್ ಹೆಸರಿನಲ್ಲಿ ಮುಂಬೈನ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಹಾಗಾಗಿ ಮಾಳವಿಕಾ ಅವರಿಗೆ ಮುಂಬೈ ಪೊಲೀಸರು ಕರೆ ಮಾಡಿ, ವಿಚಾರಿಸಿದ್ದಾರೆ.
ಮುಂಬೈ ಪೊಲೀಸರು ಕರೆ ಮಾಡಿ ಕೇಸ್ ದಾಖಲಾಗಿರುವ ಬಗ್ಗೆ ತಿಳಿಸಿದ್ದಾಗ ಮಾಳವಿಕಾ ಅವರು ಅಚ್ಚರಿ ಮತ್ತು ಆತಂಕಕ್ಕೆ ಒಂದು ಕ್ಷಣ ಒಳಗಾಗಿದ್ದಾರೆ. ಬಳಿಕ ಸುಧಾರಿಸಿಕೊಂಡು ವಂಚನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
ಮುಂಬೈನಿಂದ ಕರೆ ಮಾಡಿದ್ದ ಪೊಲೀಸ್ ಅಧಿಕಾರಿಗಳು ಮಾಳವಿಕಾ ಅವಿನಾಶ್ ಅವರ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಸ್ವತಃ ಮಾಳವಿಕಾ ಅವರೇ ಪೊಲೀಸರಿಗೆ ಕರೆ ಮಾಡಿ, ತಮ್ಮ ಆಧಾರ್ ಕಾರ್ಡ್ ಅನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಮುಂಬೈ ಪೊಲೀಸರಿಗೆ ಮಾಳವಿಕಾ ವಿಡಿಯೋ ಕಾಲ್ ಮಾಡಿದಾಗ, ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ನೀವು ಕೆಜಿಎಫ್ ನಟಿ ಅಲ್ಲವಾ ಮೇಡಂ ಎಂದು ಗುರುತು ಹಿಡಿದಿದ್ದಾರೆ. ನಂತರ ಈ ಬಗ್ಗೆ ದೂರು ದಾಖಲಿಸುವಂತೆ ಪೊಲೀಸರೇ ಸೂಚಿಸಿದ್ದಾರಂತೆ. ಈ ಎಲ್ಲ ಮಾಹಿತಿಯನ್ನೂ ಸೋಷಿಯಲ್ ಮೀಡಿಯಾ ಮೂಲಕ ಮಾಳವಿಕಾ ಹಂಚಿಕೊಂಡಿದ್ದಾರೆ. ಆಧಾರ್ ಕಾರ್ಡ್ ಹೇಗೆ ದುರುಪಯೋಗ ಆಯಿತು ಎಂಬುವುದು ಈವರೆಗೂ ತಿಳಿಯಲಾಗದೆ ತಲೆ ಕೆಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.