ಬೆಂಗಳೂರು: ಚಾಕು ಇರಿದು ಸರ್ಕಾರಿ ಅಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿಯಾಗಿದ್ದ ಪ್ರತಿಮಾ ಹತ್ಯೆಯಾದ ಅಧಿಕಾರಿ. ನಿನ್ನೆ ರಾತ್ರಿ 8.30ಕ್ಕೆ ಕೊಲೆಯಾಗಿದ್ದಾರೆ. ಆದರೆ, ಇಂದು ಬೆಳಗ್ಗೆ ಅಣ್ಣ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.
ಪೂರ್ಣಿಮಾ ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು. ಸದ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿಯಾಗಿದ್ದ ಅವರು, ಅಪಾರ್ಟ್ ಮೆಂಟ್ನಲ್ಲಿ ಒಬ್ಬರೆ ವಾಸವಿದ್ದರು. ಹೀಗಾಗಿ ಪ್ರತಿಮಾ ಅವರನ್ನು ಪ್ರೀ ಪ್ಲಾನ್ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಪಾರ್ಟ್ ಮೆಂಟ್ನಲ್ಲಿ ಪ್ರತಿಮಾ ಒಬ್ಬರೇ ವಾಸ ಮಾಡುತ್ತಿದ್ದು, ಪತಿ ಮತ್ತು ಪುತ್ರ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ. ಇನ್ನು ಇವರು ಕಚೇರಿಯ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬಂದಿದ್ದಾರೆ. ಕಾರು ಚಾಲಕ ಅವರನ್ನು ಮನೆ ಬಳಿ ಬಿಟ್ಟು ಹೋದ ಬಳಿಕ ಘಟನೆ ನಡೆದಿದೆ ಎನ್ನಲಾಗಿದೆ.
ಇನ್ನು ರಾತ್ರಿ ಅಣ್ಣ ಕರೆ ಮಾಡಿದಾಗ ಪ್ರತಿಮಾ ಕರೆ ಸ್ವೀಕರಿಸಿಲ್ಲ ಏನೋ ಆಯಾಸಗೊಂಡು ಮಲಗಿರಬೇಕು ಎಂದು ಸುಮ್ಮನಾಗಿ, ಬೆಳಗ್ಗೆ ಮನೆ ಬಳಿ ಬಂದು ನೋಡಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.
ಇನ್ನು ಹತ್ಯೆಯಾಗಿರುವ ಮನೆಯಲ್ಲಿ ಯಾವುದೇ ವಸ್ತುಗಳು ಕಳವಾಗಿಲ್ಲ. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಈ ಕೊಲೆ ನಡೆದಿದೆ ಎಂಬ ಅನುಮಾನ ಮನೆಯವರಲ್ಲಿ ಹುಟ್ಟುಕೊಂಡಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಟುಂಬಸ್ಥರಿಗೆ ಇಂದು ಬೆಳಗ್ಗೆ ಈ ವಿಚಾರ ಗೊತ್ತಾಗಿದ್ದು, ಮೃತದೇಹದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಎಸಿಪಿ ಪವನ್, ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿದ್ದಾರೆ.