ಹಾಸನ: ಸಾರಿಗೆ ಇಲಾಖೆಯ ನೌಕರನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಸಾರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಜನಹಳ್ಳಿ ಗ್ರಾಮದ ನಿವಾಸಿ ವೀರಪ್ಪ (58) ಕೊಲೆಯಾದವರು. ಕುಟುಂಬ ಸದಸ್ಯರ ಆರೋಪದಂತೆ, ದಾಯಾದಿಗಳ ನಡುವೆ ನಡೆಯುತ್ತಿದ್ದ ಆಸ್ತಿ ವಿವಾದವೇ ಈ ಹತ್ಯೆಗೆ ಮೂಲ ಕಾರಣ ಎಂದು ತಿಳಿದು ಬಂದಿದೆ.
ಇನ್ನು ಮಲ್ಲಮ್ಮ, ಮಹದೇವಮ್ಮ, ಹರೀಶ, ಲೋಕೇಶ, ಮಹದೇವ, ಬಾಗಲಯ್ಯ, ಸತೀಶ, ಜಯರಾಮ, ಧರ್ಮ ಮತ್ತು ಸ್ವಾಮಿ ಎಂಬುವರೆ ನಮ್ಮ ತಂದೆಯನ್ನು ಹತ್ಯೆ ಮಾಡಿದ್ದಾರೆ ಎಂದು ಈ 10 ಮಂದಿ ವಿರುದ್ಧ ವೀರಪ್ಪ ಅವರ ಮಗ ವಿವೇಕ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಈ ನಡುವೆ ಎರಡು ಎಕರೆ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದ ವೀರಪ್ಪ ಅವರನ್ನು ಕೇಸ್ ಮುಗಿಸಿ ಬಂದ ಸಂಜೆಯೇ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಹತ್ಯೆ ಸಂಬಂಧ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ವೀರಪ್ಪ ಅವರ ಪುತ್ರ ವಿವೇಕ್ ಆಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಗಳವಾರ ಆಲೂರಿನಲ್ಲಿ ನಡೆಯುತ್ತಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ವೀರಪ್ಪ ಅವರು ಹಿಂದಿರುಗಿದ ಬಳಿಕ ಸಂಜೆ ವೇಳೆ ತಮ್ಮ ಜಮೀನಿನತ್ತ ತೆರಳಿದ್ದರು. ಈ ಸಂದರ್ಭ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ದಾಳಿ ನಡೆಸಿ, ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ವೀರಪ್ಪರ ದೇಹ ಸಂಪೂರ್ಣ ಸುಟ್ಟು ಹೋಗಿದೆ. ಈ ಕೊಲೆ ಕೃತ್ಯ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related










