ಮೈಸೂರು: ರೈತರ ಅಹೋರಾತ್ರಿ ಧರಣಿಯಲ್ಲಿ ಸರ್ಕಾರ, ಮಂತ್ರಿಗಳ ಅಣಕಿಸುವ ಭಜನೆ
ಮೈಸೂರು: ಜಿಲ್ಲೆಯಿಂದ ದೂರವಾದ ಮಂತ್ರಿ ಏತಕೇ, ರೈತರನ್ನು ಮರೆತೆ ಏತಕೇ, ಜನರಿಗೆ ಏನು ಮಾಡಿದೆ, ಇದು ನ್ಯಾಯವೇ, ಇದು ಧರ್ಮವೇ ಎಂಬ ಹಾಡು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕೇಳಿ ಬರುತ್ತಿತ್ತು. ಏಕೆ ಈ ಹಾಡು ಎನ್ನುತ್ತಿದ್ದೀರಾ? ಇದು ಸರ್ಕಾರ ಮತ್ತು ಮಂತ್ರಿಗಳು ರೈತರ ಜತೆ ನಡೆದುಕೊಳ್ಳುತ್ತಿರುವುದನ್ನು ಅಣಕಿಸಿ ರೈತರೇ ಕಟ್ಟಿದ ಹಾಡುಇದು.
ಹೌದು! ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬು ಬೆಳೆಗಾರ ರೈತರು ಕಳೆದ 7ನೆ ದಿನಗಳಿಂದಲೂ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ಈವರೆಗೂ ಆಲಿಸಿಲ್ಲ. ಇದರಿಂದ ರೊಚ್ಚಿಗೆದ್ದಿರುವ ರೈತರು ಇಂದು ಈ ರೀತಿಯ ಹಾಡುಗಳನ್ನು ಹಾಡುವ ಮೂಲಕ ಕಿಡಿಕಾರಿದ್ದಾರೆ.
ಕಳೆದ ನಾಲ್ಕು ತಿಂಗಳುಗಳಿಂದ ಕಬ್ಬು ಬೆಳೆಗಾರ ರೈತರು ಕಬ್ಬಿನ ದರ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಿದ್ದರೂ ಇದರ ಬಗ್ಗೆ ಯಾವುದೇ ಮಾತನಾಡಿಲ್ಲ, ಕಬ್ಬು ಬೆಳೆಗಾರ ರೈತರು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿದ್ದರು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.
ಇತ್ತ ಎಂಎಲ್ಎಗಳು ಸಂಬಳ ಏರಿಕೆ ಮಾಡುವಾಗ ಯಾವುದೇ ಚರ್ಚೆ ಮಾಡೋದಿಲ್ಲ. ರೈತರಿಗೆ ಕಬ್ಬಿನ ಬೆಲೆ ಏರಿಕೆ ಮಾಡುವಂತೆ 4 ತಿಂಗಳು ಹೋರಾಟ ನಡೆಸಿದರು ಮಾತಾಡೋದಿಲ್ಲ ಇವರನ್ನು ಎಂಎಲ್ಎಗಳು, ಮಂತ್ರಿಗಳು ಅಂತ ಹೇಳಬೇಕಾ, ರೈತ ದ್ರೋಹಿಗಳು, ಸಕ್ಕರೆ ಕಾರ್ಖಾನೆ ಗುಲಾಮರು ಅಂತ ಕರಿಬೇಕಾ ಎಂದು ಧರಣಿ ಸತ್ಯಾಗ್ರಹದಲ್ಲಿ ಕುರುಬೂರು ಶಾಂತಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಶುಗರ್ ಮಾಫಿಯಾ ದೇಶದಲ್ಲಿ ಬಹುದೊಡ್ಡ ಮಾಫಿಯಾ ಆಗಿದೆ. ಈ ಮಾಫಿಯಾ ಕಬ್ಬು ಬೆಳೆಗಾರರನ್ನು ನಾಶ ಮಾಡುತ್ತಿದೆ. ಜನಪ್ರತಿನಿಧಿಗಳು ಮಾಫಿಯಾ ಬಲೆಯಲ್ಲಿ ಬಿದ್ದಂತೆ ಕಾಣುತ್ತಿದೆ. ಇಂದು ನಮ್ಮನ್ನು ಮುಖವಾಡದ ಸರ್ಕಾರ ಆಳುತ್ತಿದೆ, ಕಾಣದ ಕೈಗಳು ಸರ್ಕಾರವನ್ನು ದಿಕ್ಕು ತಪ್ಪಿಸುತ್ತಿವೆ. ಆದ್ದರಿಂದಲೇ ರೈತರು ಸಂಕಷ್ಟ ಪಡುವಂತಾಗಿದೆ ಎಂದು ಕಿಡಿಕಾರಿದರು.
ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಚುಂಚರಾಯನಹುಂಡಿ ಮಂಜು, ಸಿದ್ದರಾಮು, ನಂಜುಂಡಸ್ವಾಮಿ, ಮಲ್ಲಪ್ಪ, ಮಹದೇವಸ್ವಾಮಿ, ಮಹದೇವಪ್ಪ, ಶಿವಮೂರ್ತಿ ಕಾಳಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ, ಕೆಆರ್‌ಎಸ್ ರಾಮೇಗೌಡ, ಅಂಬಳೆ ಮಂಜುನಾಥ್ ಮುಂತಾದವರು ಇದ್ದರು.