ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧೆಡೆಯಿಂದ ಪ್ರವಾಸಿಗರ ದಂಡೆ ಹರಿದು ಬಂದಿದೆ.
ಕಳೆದ 2021ರ ದಸರಾ ವೇಳೆ ಅರಮನೆಗೆ ಪ್ರವೇಶ ಪಡೆಯಬೇಕು ಎಂದರೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿತ್ತು. ಕಾರಣ ಕೊರೊನಾ ಎಂಬ ಮಹಾ ಮಾರಿಗೆ ವಿಶ್ವವೇ ನಲುಗಿ ಹೋಗಿದ್ದು. ಈ ಬಾರಿ ಕೊರೊನಾ ಎಂಬ ಮಾರಿಯನ್ನು ಹೊಡೆದೋಡಿಸಿದ್ದು, ದಸರಾ ಮಹೋತ್ಸವಕ್ಕೆ ಅದ್ದೂರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ 9ದಿನದಿಂದ ಮನರಂಜಿಸುತ್ತಿದ್ದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ತೆರೆದಿಬಿದ್ದು, ಇನ್ನು ದೀಪಾಲಂಕಾರದ ವೈಭವದಲ್ಲಿ ಝಗಮಗಿಸುತ್ತಿರುವ ಸಾಂಸ್ಕೃತಿಕ ನಗರಿಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ದಸರಾ ಮಹೋತ್ಸವದ ಕೊನೆಯ ದಿನವಾದ ಬುಧವಾರ (ಅ.5) ಅರಮನೆ ಆವರಣದಿಂದ ಕವಾಯತು ಮೈದಾನದ ವರೆಗೂ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಸಾಗಲಿದೆ.
ಕೋವಿಡ್–19 ಕಾರಣ ಸತತ ಎರಡನೇ ವರ್ಷವೂ ಜಂಬೂಸವಾರಿಯನ್ನು ನೇರವಾಗಿ ಕಣ್ತುಂಬಿಕೊಳ್ಳಲು ಜನಸಾಮಾನ್ಯರಿಗೆ ಅವಕಾಶವಿರಲಿಲ್ಲ. ಅಂದು ಅರಮನೆ ಆವರಣದಲ್ಲಿ 500 ಜನರನ್ನು ಸೇರಿಸಲು ಮಾತ್ರ ಸರ್ಕಾರ ಅನುಮತಿ ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರಮಾಡಲಾಗಿತ್ತು. ಆದರೆ ಈ ಬಾರಿ ಸಹಸ್ರ ಸಹಸ್ರ ಜನರು ಭಾಗವಹಿಸಬಹುದಾಗಿದೆ. ಈ ಮೂಲಕ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಸಲಾಗುತ್ತಿದೆ.
ನಾಳೆ ಸಂಜೆ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದು, ಬಳಿಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಉತ್ಸವಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ರಥದಲ್ಲಿ ಮೆರವಣಿಗೆಯಲ್ಲಿ ತರಲಾಗುತ್ತದೆ.
ಕಾಡಾನೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಯ ಮುಂದಾಳು ಎನಿಸಿರುವ ಅಭಿಮನ್ಯು ಆನೆಯು ಸತತ ಮೂರನೇ ಬಾರಿ 750 ಕೆಜಿಯ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ. ಕಳೆದ ಬಾರಿ ಕೇವಲ 250ರಿಂದ 300 ಮೀಟರ್ ದೂರಕ್ಕೆ ಸೀಮಿತವಾಗಿದ್ದ ಜಂಬೂಸವಾರಿ ಈ ಬಾರಿ ಅದ್ದೂರಿಯಾಗಿ ಜರುಗಲಿದೆ.
34 ಸ್ತಬ್ಧ ಚಿತ್ರ , ವಿವಿಧ ಕಲಾ ತಂಡಗಳು, ಅಶ್ವಾ ರೋಹಿ ಪಡೆ ಪಾಲ್ಗೊಳ್ಳಲಿವೆ. ಕಳೆದ ಒಂಬತ್ತು ದಿನಗಳಿಂದ ಅರಮನೆ, ರಸ್ತೆಗಳು, ವೃತ್ತಗಳು, ಪಾರಂಪರಿಕ ಕಟ್ಟಡಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ಭಾರಿ ಸಂಖ್ಯೆಯಲ್ಲಿ ಜನ ಮಳೆ ಲೆಕ್ಕಿಸದೆ ಕುಟುಂಬ ಸಮೇತರಾಗಿ ಬಂದು ವೀಕ್ಷಿ ಸುತ್ತಿರುವುದು ಪ್ರವಾಸೋದ್ಯಮ ಚೇತರಿಕೆಗೂ ಪುಷ್ಟಿ ನೀಡಿದೆ.