ಮೈಸೂರು: ನಂಜನಗೂಡು ತಾಲೂಕಿನ ಇತಿಹಾಸ ಪ್ರಸಿದ್ಧ ಕಾರ್ಯ ಸಿದ್ದೇಶ್ವರ ಸ್ವಾಮಿ ಜಾತ್ರಾಮಹೋತ್ಸವವು ಅದ್ದೂರಿಯಾಗಿ ನಡೆಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದರು.
ಕಾರ್ಯಕ್ರಮದಿಂದ ಸುಮಾರು ಒಂದು ಕಿಲೋಮೀಟರ್ ದೂರವಿರುವ ಕಾರ್ಯ ಸಿದ್ದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವಕ್ಕೆ ಗ್ರಾಮದ ದೇವಾಲಯದಿಂದ ಪಲ್ಲಕ್ಕಿ ಉತ್ಸವ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಾಗುವುದು ಈ ವೇಳೆಯಲ್ಲಿ ಭಕ್ತಾದಿಗಳು ರಥದ ಚಕ್ರಕ್ಕೆ ಈಡುಗಾಯಿ ಹೊಡೆಯುವುದು ರಥಕ್ಕೆ ಹಣ್ಣು ದವನ ಎಸೆದು ಹರಕೆ ತಿಳಿಸಿ ದೇವರ ದರ್ಶನ ಪಡೆದರು.
ಆ ನಂತರ ಬೆಟ್ಟಕ್ಕೆ ಗ್ರಾಮದಿಂದ ರಥದ ಪಲ್ಲಕಿಯನ್ನು ಭಕ್ತಾದಿಗಳು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಕಾರ್ಯಸಿದ್ದೇಶ್ವರ ಬೆಟ್ಟವನ್ನು ಹತ್ತಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ಈ ವೇಳೆಯಲ್ಲಿ ಅರ್ಚಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಪ್ರಸಾದ ನೀಡಿದರು.
ರಥೋತ್ಸವದ ವೇಳೆ ವರುಣ ಕ್ಷೇತ್ರದ ಮಾಜಿ ಶಾಸಕರು ಹಾಗೂ ಆಶ್ರಯ ಸಮಿತಿ ಅಧ್ಯಕ್ಷರಾದ ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಕಾಪು ಸಿದ್ದಲಿಂಗ ಸ್ವಾಮಿ, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಗ್ರಾಮದ ಮುಖಂಡರಾದ ಸಿದ್ದಯ್ಯ ಸ್ವಾಮಿ, ಕುಮಾರ, ಚಿನ್ನಂಬಳ್ಳಿ ರಾಜು, ಮಂಜುನಾಥ, ಸಿದ್ದರಾಮಯ್ಯಗೌಡ, ಜಗದೀಶ ಕುಮಾರ, ದಾಸಯ್ಯ, ಚಿನ್ನಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಜಾತ್ರಾ ಮಹೋತ್ಸವ ಅಂಗವಾಗಿ ಹಿರಿಯ ಪೊಲೀಸ್ ಅಧಿಕಾರಿ ಗೋವಿಂದರಾಜು ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಏರ್ಪಡಿಸಲಾಗಿತ್ತು.