ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆ ಸೇರಿದಂತೆ ನಗರದ ವಿವಿಧೆಡೆ ಸಿದ್ಧತಾ ಕಾರ್ಯಗಳು ಚುರುಕು ಪಡೆದುಕೊಂಡಿವೆ.
ಅರಮನೆ ಕಟ್ಟಡಕ್ಕೆ ಶಾಶ್ವತವಾಗಿ ಮಾಡಿರುವ ದೀಪಾಲಂಕಾರದ ಹಾಳಾಗಿದ್ದ 24.5 ಸಾವಿರ ಬಲ್ಬ್ ಬದಲಿಸುವ ಕಾರ್ಯದಲ್ಲಿ 15 ದಿನದಿಂದ ಅರಮನೆ ಸಿಬ್ಬಂದಿ ಒಳಗೊಂಡಂತೆ ಎಲೆಕ್ಟ್ರಿಷಿಯನ್‌ಗಳು ತೊಡಗಿದ್ದು ಕೆಲ ದಿನಗಳಲ್ಲೇ ಪೂರ್ಣಗೊಳ್ಳಲಿದೆ.
ಅರಮನೆ ಮುಖ್ಯ ಕಟ್ಟಡ, ಪ್ರವೇಶದ್ವಾರ, ವಿವಿಧ ಗೋಡೆ ಮೇಲೆ ಅಳವಡಿಸಿರುವುದೂ ಸೇರಿ ಒಟ್ಟು 1 ಲಕ್ಷ ಬಲ್ಬ್‌ಗಳಿಂದ ಬೆಳಕು ಝಗಮಗಿಸಿ ಅರಮನೆ ಸೌಂದರ್ಯ ವೃದ್ಧಿಸಲಿದೆ. ಆದರೆ, ಪ್ರತಿದಿನ ಪಾರಿವಾಳಗಳು ಹಾರಾಡುವಾಗ, ಜೋರಾಗಿ ಗಾಳಿ ಬೀಸಿದಾಗ, ದೀಪಾಲಂಕಾರದ ವೇಳೆ ಮಳೆ ಬಂದಾಗ ಕೆಲವು ಬಲ್ಬ್‌ಗಳು ಸಿಡಿದುಹೋಗುತ್ತವೆ.
ಹೀಗಾಗಿ ಪ್ರತಿ ವರ್ಷ ದಸರಾ ವೇಳೆ 15 ರಿಂದ 20 ಸಾವಿರ ಬಲ್ಬ್ ಹಾನಿಗೀಡಾಗುತ್ತವೆ. ಇದರಿಂದ ದೀಪಗಳ ಸಾಲು ಪರಿಶೀಲಿಸಿ ಕೆಟ್ಟಿರುವ ಬಲ್ಬ್ ಗುರುತಿಸಲಾಗಿದ್ದು, ಅದಕ್ಕಾಗಿ ದೆಹಲಿ, ಕೋಲ್ಕತ್ತದಲ್ಲಿ ವಿಶೇಷವಾಗಿ ಬಲ್ಬ್ ತರಿಸಲಾಗಿದೆ. ಆದರೆ, ಈ ಬಾರಿ ಕೊಂಚ ಹೆಚ್ಚಾಗಿ ಬಲ್ಬ್ ಹಾಳಾಗಿದ್ದು, ಅವುಗಳನ್ನು ಬದಲಾಯಿಸಲಾಗುತ್ತಿದೆ.
ದೇಶದೆಲ್ಲಡೆ ಎಲ್‌ಇಡಿ ದೀಪ ಹೆಚ್ಚಾಗಿದ್ದರೂ ಪಾರಂಪರಿಕ ಸೌಂದರ್ಯ ಕಾಯ್ದುಕೊಳ್ಳಲು ಮೈಸೂರು ಅರಮನೆಗೆ ಇಂದಿಗೂ ಸಾಮಾನ್ಯ ಬಲ್ಬ್‌ಗಳನ್ನೇ ಬಳಸಲಾಗುತ್ತಿದೆ. ಸ್ವರ್ಣ ಬಣ್ಣದಿಂದ ಬೆಳಗಲಿರುವ ಈ ಬಲ್ಬ್‌ಗಳು ಅರಮನೆ ಅಂದಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಒಟ್ಟಾರೆ ದಸರಾಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.