ಬೆಂ.ಗ್ರಾ.: ಜಿಲ್ಲೆಯಾದ್ಯಂತ ಜಲ್ ಜೀವನ್ ಮಿಷನ್ ಅನುಷ್ಠಾನ ಪ್ರಾರಂಭಿಸಿ, ಗ್ರಾಮಗಳಲ್ಲಿ ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್.ಅನುರಾಧ ತಿಳಿಸಿದರು.
ಇಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪ ಇಲಾಖೆ, ಎನ್.ಆರ್.ಎಲ್.ಎಂ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಇವರ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ‘ನಲ್‌ಜಲ್ ಮಿತ್ರ ತರಬೇತಿ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೈಪ್‌ಗಳ ಮೂಲಕ ನೀರಿನ ವ್ಯವಸ್ಥೆಯ ನಿರಂತರ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಡೆ ಹೆಚ್ಚು ಗಮನಹರಿಸಲಾಗಿದ್ದು, ಈ ಇಲಾಖೆ ಸಂಪೂರ್ಣ ಕಾರ್ಯಕ್ರಮದ ಉಸ್ತುವಾರಿಯನ್ನು ಗ್ರಾಮ ಪಂಚಾಯಿತಿಗಳು ವಹಿಸಿಕೊಂಡು ಸಂಪೂರ್ಣ ನಿರ್ವಹಣೆ ಮಾಡಲು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಇನ್ನು ಈ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಸ್ವಸಹಾಯ ಸಂಘದ ಸ್ಥಳೀಯ ವ್ಯಕ್ತಿಗಳಿಗೆ ಬಹು ಕೌಶಲ್ಯ ತರಬೇತಿಯಡಿ, ಕೊಳಾಯಿ (Plumbing), ವಿದ್ಯುತ್ ಕೆಲಸ(Electrical work), ಕಲ್ಲು ಮಣ್ಣು ಕೆಲಸ(Masonry). ಉಪಕರಣ & ಯಂತ್ರೋಪಕರಣ ರಿಪೇರಿ (Pump operations) ಕೆಲಸಗಳ ಬಹುಕೌಶಲ್ಯ ತರಬೇತಿ ನೀಡಿ ವೃತ್ತಿಪರ ಶಿಕ್ಷಣ ಮತ್ತು ರಾಷ್ಟ್ರೀಯ ತರಬೇತಿ ಮಂಡಳಿ (NCVET)ಯ ಪ್ರಮಾಣ ಪತ್ರ ನೀಡುವುದಾಗಿ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಎನ್. ಮುನಿರಾಜು, ಕಂಟನಕುಂಟೆ ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ಪ್ರೋ. ಚಂದ್ರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವೀಣಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಮಂಜುಳಾ, ದೊಡ್ಡಬಳ್ಳಾಪುರ ತಾಲ್ಲೂಕು ಸಂಜೀವಿನಿ ಸಿಬ್ಬಂದಿಗಳು ಹಾಗೂ 25 ಗ್ರಾಮ ಪಂಚಾಯಿತಿಗಳ ನಲ್ ಜಲ್ ಮಿತ್ರಗೆ ಆಯ್ಕೆಯಾದ ಮಹಿಳಾ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.