ಮೈಸೂರು: ಜನವರಿ 4 ರಂದು ನಂಜನಗೂಡು ಬಂದ್‌ಗೆ ಕರೆ ನೀಡಲಾಗಿದೆ. ನಂಜುಂಡೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾಗರೀಕರಿಂದ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.
ಏನಿದು ಪ್ರಕರಣ..?: ಅಂಧಕಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು.
ಈ ವೇಳೆ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ವಿವರಿಸಿದ್ದರು. ಆದರೂ ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದಾರೆ ಎಂದು ಆರೋಪಿಸಲಾಗಿತ್ತು.
ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು, ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನಲ್ಲೇನಿದೆ..?: ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಕುಡಿಯುವ ನೀರಿನ ಬಾಟ್ಲಿಯಲ್ಲಿ ಉತ್ಸವ ಮೂರ್ತಿಗೆ ನೀರನ್ನ ಎರಚುವ ಮೂಲಕ ಅಪಮಾನ ಮಾಡಿದ್ದಾರೆ. ನಾವು ಯಾವುದೇ ವ್ಯಕ್ತಿಯನ್ನ ಅಪಮಾನ ಮಾಡುವಂತೆ ಕೆಲಸ ಮಾಡಿಲ್ಲ ಎಂದು ವಿವರಿಸಿದ್ದೇವೆ. ಆದರೂ ಕೆಲವು ವ್ಯಕ್ತಿಗಳು ಉತ್ಸವ ಮೂರ್ತಿಯ ಮೇಲೆ ಕುಡಿಯುವ ನೀರಿನ ಬಾಟ್ಲಿಯಿಂದ ನೀರು ಎರಚಿದ್ದಾರೆ. ಇದು ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದಿದ್ದರು.