ರಾಷ್ಟೀಯ ರೈತರ ದಿನಾಚರಣೆ: ದೇಶದ ಅನ್ನದಾತರಾದ ರೈತರ ಶ್ರಮ, ತ್ಯಾಗ, ಕೊಡುಗೆ ಸ್ಮರಿಸಿ: ಸಚಿವ ಮುನಿಯಪ್ಪ ಕರೆ

ಬೆಂಗಳೂರು ಗ್ರಾಮಾಂತರ: ರೈತರು ಬೆವರು ಸುರಿಸಿ ಬೆಳೆದ ಬೆಳೆಗಳಿಂದಲೇ ನಮ್ಮ ಬದುಕು ಸಾಗುತ್ತಿದೆ. ಪ್ರಕೃತಿ ಸವಾಲುಗಳು, ಮಾರುಕಟ್ಟೆ ಅಸ್ಥಿರತೆಗಳ ನಡುವೆಯೂ ಅವರು ಸಮಾಜದ ಆಹಾರ ಭದ್ರತೆಯನ್ನು ಕಾಪಾಡುತ್ತಿದ್ದಾರೆ ಅವರ ಶ್ರಮವನ್ನು ನಾವು ಸ್ಮರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದರು.

ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ಇವರ ವತಿಯಿಂದ ದೇವನಹಳ್ಳಿ ತಾಲೂಕಿನಲ್ಲಿರುವ ದೇವರಾಜ ಅರಸು ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟೀಯ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ರೈತ ದಿನ ಅನ್ನದಾತರ ಮಹತ್ವವನ್ನು ಸಾರುವ ದಿನ. ರೈತರ ಗೌರವವೇ ರಾಷ್ಟ್ರದ ಗೌರವ. ರೈತನೇ ರಾಷ್ಟ್ರದ ಬೆನ್ನೆಲುಬು, ರೈತರ ಆತ್ಮಹತ್ಯೆಗಳು ಆಗಬಾರದೆಂದು ಸಾಕಷ್ಟೂ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಯಾವ ರೈತರೂ ಕೂಡ ಆತುರದಿಂದ ಆತ್ಮಹತ್ಯೆ ಮಾಡಿಕೊಳ್ಳಬಾರದು. ಚನ್ನರಾಯಪಟ್ಟಣದ ರೈತರ ಸಂಪೂರ್ಣ ಭೂಮಿಯನ್ನು ಮುಖ್ಯಮಂತ್ರಿಗಳು ಕೈ ಬಿಟ್ಟಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ರೈತರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು, ಅವರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಚರ್ಚೆ ನಡೆಸುವುದು ಹಾಗೂ ಎತ್ತಿನ ಹೊಳೆ ಯೋಜನೆಯ ಪ್ರಸಕ್ತ ಕಾಮಗಾರಿ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಬಮೂಲ್ ನಿರ್ದೇಶಕ ಎಸ್ ಪಿ.ಮುನಿರಾಜು ಮಾತನಾಡಿ, ರೈತರ ಪರವಾಗಿ ಹಲವಾರು ಯೋಜನೆಗಳಲ್ಲಿ ಮೇವು ಕತ್ತರಿಸುವ ಯಂತ್ರ ,ಹಸು ಸಾಕಾಣಿಕರಗೆ ಸಬ್ಸಿಡಿಯಲ್ಲಿ ಧನಸಹಾಯ,ವಿದ್ಯಾವಂತ ಯುವ ರೈತರಿಗೆ ಯಾವುದೇ ಭೂಮಿ ಅಡ ಇಡದೇ ಧನಸಹಾಯ ಪಡೆಯಬಹುದು, ಕೆಐಡಿಬಿ ವಶವಾಗುತ್ತಿದ್ದ ರೈತರ ಭೂಮಿಯನ್ನು ಕಾಪಾಡುವಲ್ಲಿ ಸಚಿವರ ಶ್ರಮ ಅಗಾಧ ಅವರು ರೈತರ ಹಿತ ಕಾಪಾಡುವಲ್ಲಿ ಸದಾಸಿದ್ಧ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ವತಿಯಿಂದ ಕೃಷಿಗೆ ಸಂಬಂಧಿತ ಮಾಹಿತಿ ನೀಡುವ ಮಳಿಗೆಗಳನ್ನು ಉದ್ಘಾಟಿಸಿ, ಜಿಲ್ಲೆಯ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ದೇವನಹಳ್ಳಿ ತಾಲೂಕು ತಹಸೀಲ್ದಾರ್ ಅನಿಲ್ ಕುಮಾರ್, ಬೆಂಗಳೂರು ಅಂತರರಾಷ್ಟೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿ.ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಚನ್ನಹಳ್ಳಿ ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಸ್.ರವಿಕುಮಾರ್, ದೇವನಹಳ್ಳಿ ಪುರಸಭೆ ಅಧ್ಯಕ್ಷ ಮುನಿಕೃಷ್ಣ, ತಾಲೂಕು ಅಧ್ಯಕ್ಷ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಿತ್ತರಹಳ್ಳಿ ರಮೇಶ್, ಬಯಪ ನಿರ್ದೇಶಕ ಪ್ರಸನ್ನಕುಮಾರ್, ತಾಲೂಕು ಸಹಾಯಕ ನಿರ್ದೇಶಕಿ ಸುಶೀಲಮ್ಮ ಸೇರಿದಂತೆ ಮುಖಂಡರು ಮತ್ತು ರೈತರು ಉಪಸ್ಥಿತರಿದ್ದರು.
Related









