NEWSನಮ್ಮಜಿಲ್ಲೆನಮ್ಮರಾಜ್ಯ

ಶಾಸಕರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೆನ್ನಾಗರ ಕೆರೆ ಒತ್ತುವರಿ: ಮೋಹನ್ ದಾಸರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗ ವಿಧಾನಸಭಾ ಕ್ಷೇತ್ರದ ಜಿಗಣಿಯಲ್ಲಿರುವ ಹೆನ್ನಾಗರ ಕೆರೆ ಒತ್ತುವರಿಯಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ, ಇಲ್ಲಿನ ಶಾಸಕ ಕೃಷ್ಣಪ್ಪ ಅವರೂ ಕೂಡ ಜಾಗಗಳನ್ನು ಒತ್ತುವರಿ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆರೋಪಿಸಿದ್ದಾರೆ.

ಕೆರೆ ಒತ್ತುವರಿಯಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳು ಕೇಳಿ ಬಂದ ಬಳಿಕ ಆಮ್ ಆದ್ಮಿ ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಮೋಹನ್ ದಾಸರಿ ಅವರು, ಇಲ್ಲಿ ಒತ್ತುವರಿಯಾಗಿರುವುದ ನಿಜ, ಸರ್ಕಾರಿ ಅಧಿಕಾರಿಗಳು ಈಗ ಬಂದು ಪರಿಶೀಲನೆ ಮಾಡಿದ್ದಾರೆ ಆದರೆ ಇಷ್ಟು ದಿನ ಏನು ಮಾಡುತ್ತಿದ್ದರು, ಅವರ ಗಮನಕ್ಕೆ ಬರದೆ ಇದೆಲ್ಲಾ ಆಗಿದೆಯಾ ಎಂದು ಪ್ರಶ್ನೆ ಮಾಡಿದರು.

ಬೆಂಗಳೂರು ದಕ್ಷಿಣ ವಿಭಾಗ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಪ್ಪನವರ ಗಮನಕ್ಕೆ ಬರದೆ ಇಷ್ಟು ದೊಡ್ಡ ಪ್ರಾಜೆಕ್ಟ್ ಬಂದಿದೆಯಾ? ಅಧಿಕಾರಿಗಳಾಗಲಿ, ಶಾಸಕರಾಗಲಿ ಸುಮ್ಮನಿದ್ದಾರೆ ಎಂದರೆ ಹಣ ಪಡೆದಿದ್ದಾರ ಎಂದು ಪ್ರಶ್ನಿಸಿದ ಅವರು, ಒತ್ತುವರಿ ಬಗ್ಗೆ ತಹಶೀಲ್ದಾರ್ ಮತ್ತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರು.

ಡಿಕೆ ಶಿವಕುಮಾರ್ ಮಧ್ಯಪ್ರವೇಶಕ್ಕೆ ಆಗ್ರಹ: ಬೆಂಗಳೂರು ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿ, ಕೆರೆಗಳನ್ನು ಯಾರು ಬೇಕಾದರೂ ಒತ್ತುವರಿ ಮಾಡಬಹುದು ಎನ್ನುವ ಪರಿಸ್ಥಿತಿ ಇದೆ. ಕೆರೆಯಿಂದ ನೂರು ಅಡಿ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂದು ಎನ್‌ಜಿಟಿ ವರದಿ ಹೇಳುತ್ತದೆ, ಆದರೆ ಇಲ್ಲಿ ಕೆರೆ ಪಕ್ಕದಲ್ಲೇ ಕಾಮಗಾರಿ ಮಾಡಲು ಒಪ್ಪಿಗೆ ಹೇಗೆ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಎನ್‌ಜಿಟಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ತಹಶೀಲ್ದಾರ್, ಅಧಿಕಾರಿಗಳಿಗೆ ಇದೆಲ್ಲಾ ಗೊತ್ತಿಲ್ಲವಾ, ಶಾಸಕರ ಗಮನಕ್ಕೆ ಇದೆಲ್ಲಾ ಬಂದಿಲ್ಲವಾ, ಇವರೆಲ್ಲಾ ಶಾಮೀಲಾಗದೆ ಈ ರೀತಿ ಮಾಡಲು ಸಾಧ್ಯವಿಲ್ಲ, ನಾವು ಈ ಜಾಗಕ್ಕೆ ಬರಲು ಕೂಡ ಪೊಲೀಸರು ಬಿಡಲಿಲ್ಲ ಎಂದರು.

ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಇಲ್ಲಿ ನೀರಿಗಾಗಿ 1500 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಇವತ್ತು ನಗರದಲ್ಲಿ 118 ಕೆರೆಗಳು ಮಾತ್ರ ಇದ್ದು 90 ಕೆರೆಗಳು ಕೊಳಚೆ ನೀರಿನಿಂದ ತುಂಬಿದೆ. ಯಾವ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಈ ಕೆರೆ ತುಂಬಿದರೆ ಅಂತರ್ಜಲ ಅಭಿವೃದ್ಧಿಯಾಗುತ್ತದೆ, ಕುಡಿಯುವ ನೀರಿನ ಮೂಲವಾಗಿದೆ, ಇಂತಹ ಕೆರೆಯನ್ನು ಒತ್ತುವರಿ ಮಾಡಲಾಗುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರು ಶಾಸಕರು ಇಲ್ಲಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ರಾಂಡ್ ಬೆಂಗಳೂರು ಮಾಡಲು ಹೊರಟಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕೆರೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

Leave a Reply

error: Content is protected !!