ಬೆಂಗಳೂರು: ರೈತ ವಿರೋಧಿ ಕಾನೂನು ವಿರೋಧಿಸಿ ನಡೆಯುತ್ತಿರುವ ಭಾರತ್ ಬಂದ್ ಅಂಗವಾಗಿ ಆಮ್ ಆದ್ಮಿ ಪಕ್ಷದಿಂದ ನಾಳೆ (ಡಿ.8) 11 ಗಂಟೆಗೆ ಮೌರ್ಯ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದ ಬೆನ್ನೆಲುಬಾದ ರೈತ ಕಳೆದ 12 ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ ದೆಹಲಿ/ ಪಂಜಾಬ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸದೆ ಅನ್ನದಾತನಿಗೆ ಅವಮಾನ ಮಾಡುತ್ತಿದೆ ಎಂದರು.
ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ರೈತರನ್ನು ಕೂಡಿಹಾಕಲು ಮೈದಾನಗಳನ್ನು ಕೊಡದೆ ರೈತರ ಬೆನ್ನಿಗೆ ನಿಂತಿದೆ ಹಾಗೂ ನೀರು, ಊಟ, ಹೊದಿಕೆಯ ವ್ಯವಸ್ಥೆ ಮಾಡಿದೆ. ಆದರೆ ಕೇಂದ್ರ ಸರ್ಕಾರ ನೀಚ ಬುದ್ಧಿ ತೋರಿಸಿ ಅನ್ನದಾತನ ವಿರುದ್ಧ ನಿಂತಿದೆ ಎಂದು ಕಿಡಿಕಾರಿದರು.
ಈ ದೇಶದ ಬಹುಜನ ಸಂಸ್ಕೃತಿಗೆ ಕೊಡಲಿ ಪೆಟ್ಟು ಹಾಕಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು, ರೈತರ ಜೊತೆ ಇಡೀ ದೇಶದ ಜನರಿದ್ದಾರೆ ಎನ್ನುವುದು ಸರ್ಕಾರದ ಅರಿವಿಗೆ ಬರುವಂತೆ ಮಾಡಬೇಕು, ಆದ ಕಾರಣ ಪಕ್ಷಾತೀತವಾಗಿ ಎಲ್ಲಾ ನಾಗರಿಕರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.