ದೊಡ್ಡಬಳ್ಳಾಪುರ : ಸೊಪ್ಪಿಗೆ ತಕ್ಕ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಳಿ ರಸ್ತೆ ಬದಿ ಸುರಿಯಲಾಗಿದ್ದ ಲೋಡ್ಗಟ್ಟಲೇ ಕೊತ್ತಂಬರಿ ಸೊಪ್ಪಿಗಾಗಿ ಜನ ಮುಗಿಬಿದ್ದು, ಗೋರಿಕೊಂಡು ಹೋಗಿದ್ದಾರೆ.
ಮಂಗಳವಾರ ಬೆಳ್ಳಂ ಬೆಳಗ್ಗೆ ದೊಡ್ಡಬಳ್ಳಾಪುರ ನೆಲಮಂಗಲ ಮಾರ್ಗದ ಕೋಡಿಪಾಳ್ಯ ಬಳಿ ರಸ್ತೆ ಬದಿ ಸರಿಸುಮಾರು 2-3 ಲೋಡ್ ನಷ್ಟು ಕೊತ್ತಂಬರಿ ಸೊಪ್ಪನ್ನು ಸುರಿದು ಹೋಗಿದ್ದಾರೆ. ಇದನ್ನು ಕಂಡ ದಾರಿ ಹೋಕರು ನನಗೆ ಒಂದು, ನಿನಗೆ ಒಂದು ಅಂತ ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನು ಹೊತ್ತೊಯ್ದಿದ್ದಾರೆ. ಆದರೆ ಇಲ್ಲಿ ಕೊತ್ತಂಬರಿ ಸೊಪ್ಪು ಸುರಿದು ಹೋದವರು ಯಾರು ಎಂಬುದು ತಿಳಿದುಬಂದಿಲ್ಲ.
ರೈತರು ಮಾರುಕಟ್ಟೆಗೆ ತಂದು ರೇಟ್ ಇಲ್ಲ ಅಂತ ಸುರಿದು ಹೋಗಿರಬಹುದು ಎನ್ನಲಾಗಿದೆ. ಆದರೆ ರಸ್ತೆ ಬದಿ ಸುರಿದು ಹೋಗುವುದಕ್ಕಿಂತ ಕಡಿಮೆ ರೇಟ್‍ಗಾದರೂ ಜನರಿಗೆ ಮಾರಾಟ ಮಾಡಿ 4 ಕಾಸು ಸಂಪಾದಿಬಹುದಾಗಿತ್ತಲ್ವಾ ಎನ್ನುವುದು ಕೆಲವರ ಪ್ರಶ್ನೆ. ಬೆಳ್ಳಂಬೆಳಗ್ಗೆ ಕೊತ್ತಂಬರಿ ಸೊಪ್ಪು ಸಿಕ್ಕಿದ್ದೇ ಜನ ಹೊತ್ತೊಯ್ದಿದ್ದಾರೆ.
ಇನ್ನು ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಸಾಲವಂತರಾಗಿಯೇ ಉಳಿಯುವ ಪರಿಸ್ಥಿತಿ ಇದೆ. ಫಸಲಿಗೆ ತಕ್ಕ ದರಕ್ಕೆ ಮಾರಾಟವಾದರೆ ರೈತರು ಇತರರಂತೆ ಜೀವನ ಸಾಗಿಬಹುದು. ಆದರೆ ನಮ್ಮ ದೇಶದಲ್ಲಿ ರೈತರ ಬೆಳೆದ ಫಲಿಗೆ ತಕ್ಕ ಬೆಲೆ ನೀಡುವ ಪದ್ಧತಿ ಇನ್ನು ಬಂದಿಲ್ಲ. ಈ ಕಾರಣದಿಂದಲೇ ಅನ್ನದಾತ ಇನ್ನು ಬಡವನಾಗಿಯೇ ಉಳಿದಿದ್ದಾನೆ.
ಹಸಿದವರ ಹೊಟ್ಟೆ ತುಂಬಿಸುವ ರೈತ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪರಿತಪ್ಪಿಸುವ ಸ್ಥಿತಿ ಇರುವುದು ಇಂದಿನ ರಾಜಕಾರಣಿಗಳಿಗೂ ನಾಚಿಕೆ ಆಗದಿರುವುದು ಖೇದಕರ ಸಂಗತಿಯಾಗಿದೆ.