ಬನ್ನೂರು: ದೇಶದಲ್ಲಿ ದೇಗುಲಗಳಿಗಿಂತಲೂ ಶಾಲೆ-ಕಾಲೇಜುಗಳು ಹೆಚ್ಚಾಗಬೇಕು. ಆ ಮೂಲಕ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಮಾಜದಲ್ಲಿ ಸಮಾನತೆ ಹೊಂದಬೇಕು ಎಂಬುವುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿದೆ ಎಂದು ಪುರಸಭಾ ಅಧ್ಯಕ್ಷೆ ಭಾಗ್ಯಶ್ರೀ ಕೃಷ್ಣ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನದ ಅಂಗವಾಗಿ ಭಾನುವಾರ ಪಟ್ಟಣದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಯಾವುದೇ ಜಾತಿ ವ್ಯವಸ್ಥೆ ಇರಬಾರದು. ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು, ಹಿಂದುಳಿದ ವರ್ಗ ಎಂದು ಯಾವುದೂ ಇರಬಾರದು, ಈ ನಿಟ್ಟಿನಲ್ಲಿ ಹಿಂದಿರುವ ಸಮಾಜವನ್ನು ಮೇಲಕ್ಕೆ ಎತ್ತಲು ಮೀಸಲಾತಿ ಬೇಕು ಎಂಬಿತ್ಯಾದಿ ಉತ್ತಮ ಚಿಂತನೆಗಳನ್ನು ಹೊತ್ತು ಭಾರತ ಶ್ರೇಷ್ಠ ಕೃತಿ ಸಂವಿಧಾನದ ನಿರ್ಮಾತೃ ಆಗಿರುವ, ಶೋಷಿತರ ಪರ ಧ್ವನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ನಾವು ಎಷ್ಟು ಹೇಳಿದರೂ ಕಡಿಮೆಯೇ ಎಂದರು.
ಅಂಬೇಡ್ಕರ್ ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವ್ಯಕ್ತಿತ್ವವೇ ಅಂಥದ್ದು, ಮನುಕುಲಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕು ಎಂಬ ಆಶಯ ಇವರದ್ದಾಗಿದೆ. ಕಾರಣ, ತಮ್ಮ ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಶ್ಯತೆ. ಶಾಲೆಯಲ್ಲಿ ನಡೆದ ತಾರತಮ್ಯ ಇವರ ಮೇಲೆ ಅತೀವ ಪರಿಣಾಮ ಬೀರಿದೆ. ಜತೆಗೆ ಇಂತಹ ನೋವು ಅವರನ್ನು ಮತ್ತಷ್ಟು ಗಟ್ಟಿ ಮಾಡಿತು. ಒಬ್ಬ ಉತ್ತಮ ಹೋರಾಟಗಾರರನ್ನಾಗಿ ರೂಪಿಸಿತು ಎಂದರು.
ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳೊಂದಿಗೆ ಎಲ್ಲರೂ ಬಾಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಅಧಿಕಾರ ಸಿಗಬೇಕು ಎಂಬ ಅವರ ಕನಸ್ಸು ಇನ್ನೂ ಕುಟುಂತ ಸಾಗಿದೆ. ಹೀಗಾಗಿ ಅವರ ಕನಸನ್ನು ನನಸು ಮಾಡಲು ನಾವು ಮುನ್ನುಗ್ಗೋಣ ಎಂದು ಕರೆ ನೀಡಿದರು.
ಹೀಗೆ ಬಾಬಾ ಸಾಹೇಬರ ಬಗ್ಗೆ ಮಾತನಾಡುತ್ತಿದ್ದರೆ ಸಮಯ ಹೋಗುವುದು ಗೊತ್ತಾಗೊದಿಲ್ಲ. ಇನ್ನು ಅವರ ಬಗ್ಗೆ ನಾನು ಮಾತನಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಅನ್ನಿಸುತ್ತಿದೆ. ಬಾಬಾ ಸಾಹೇಬರು ನಮ್ಮನ್ನಗಲಿದಾಗ ಜಗತ್ತಿನ 193 ರಾಷ್ಟ್ರಗಳು ತಮ್ಮ ದೇಶಗಳ ರಾಷ್ಟ್ರಧ್ವಜಗಳನ್ನು ಅರ್ಧಕ್ಕೆ ಇಳಿಸುವ ಮೂಲಕ ಗೌರವ ಸಲ್ಲಿಸಿದವು. ಇದು ನಮ್ಮ ದೇಶಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು.
ಸಮಾರಂಭ ಆಯೋಜಕ, ವಕೀಲ ಶಿವಮೂರ್ತಿ, ಶಿಕ್ಷಕ ಸಿದ್ದೇಶ್, ಸ್ಥಳೀಯ ಮುಖಂಡರಾದ ಮಣಿಕಂಠ ದೇವರಾಜು, ಜಯಮುತ್ತ, ದಯಾನಂದ, ರವಿ, ಅಮಾರ್, ಶಿವಣ್ಣ, ಗಂಗಾಧರ್, ಸುಹೈಲ್, ಸರ್ಧಾರ್ , ಯಜಮಾನ ಕೇಶವಮೂರ್ತಿ ಮತ್ತಿತರರು ಇದ್ದರು.