NEWSಲೇಖನಗಳು

ನಮ್ಮ ಮನಸ್ಸು ಮತ್ತೊಬ್ಬರಿಗೆ ಹೇಗೆ ಅರ್ಥವಾದೀತು? 

ವಿಜಯಪಥ ಸಮಗ್ರ ಸುದ್ದಿ
  • ಅರ್ಥಪೂರ್ಣವಾದ ಮೇಲಿನ ಮಾತುಗಳು ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಮಾರ್ಗದರ್ಶಿಯಲ್ಲವೇ?

ಆ ಮಾತುಗಳನ್ನು ತಮ್ಮ ಪ್ರವಚನವೊಂದರಲ್ಲಿ ಹೇಳಿದ ಸ್ವಾಮಿ ಏಕನಾಥ್ ಈಶ್ವರನ್ ಅವರ ಹೆಸರನ್ನು ನಾವೆಲ್ಲ ಖಂಡಿತವಾಗಿಯೂ ಕೇಳಿರುತ್ತೇವೆ! ಅತ್ಯುನ್ನತ ಮಟ್ಟದ ವೇದಾಂತಿಯಾದ ಏಕನಾಥರು (1910-1999) ಮೂಲತಃ ದಕ್ಷಿಣ ಭಾರತದವರು.

ಅಮೆರಿಕಕ್ಕೆ ಹೋಗಿ ಅಲ್ಲಿ ಬ್ಲೂ ಮೌಂಟೈನ್ ಇನ್ಸ್ ‌ಟಿಟ್ಯೂಟ್ ಎಂಬ ಅಧ್ಯಾತ್ಮ ಬೋಧನೆಯ ಸಂಸ್ಥೆ ಸ್ಥಾಪಿಸಿ ಸಾವಿರಾರು ಜನರಿಗೆ ಸತ್ಯ ಸಾಕ್ಷಾತ್ಕಾರದ ಮಾರ್ಗದರ್ಶಿಗಳಾದವರು. ಭಗವದ್ಗೀತೆ ಮತ್ತು ಉಪನಿಷತ್ತುಗಳನ್ನು ಬೋಧಿಸಿದವರು.

ಜನಪ್ರಿಯ ಉಪನ್ಯಾಸಕಾರರೂ, ಹಲವಾರು ಉತ್ಕೃಷ್ಠ ಗ್ರಂಥಗಳ ಲೇಖಕರೂ ಆಗಿದ್ದವರು. ಮನಸ್ಸಿನ ವಿಚಿತ್ರ ಪರಿಯನ್ನು ವಿವರಿಸಲು ಅವರೇ ಪ್ರವಚನದಲ್ಲಿ ಹೇಳಿದ ಎರಡು ಘಟನೆಗಳು ಇಲ್ಲಿವೆ.

ಮೊದಲನೆಯದ್ದು: ಏಕನಾಥರು ಬಾಲಕನಾಗಿದ್ದಾಗ ಒಮ್ಮೆ ಓಡುವಾಗ ಎಡವಿ ಬಿದ್ದರಂತೆ. ಮೊಣಕಾಲಿಗೆ ಗಾಯವಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ವೈದ್ಯರು ‘ಮೊದಲು ಗಾಯವನ್ನು ಟಿಂಕ್ಚರ್ ಹಾಕಿ ಶುಭ್ರಗೊಳಿಸುತ್ತೇನೆ. ಆನಂತರ ಚಿಕಿತ್ಸೆ’ ಎಂದರು. ಟಿಂಕ್ಚರ್ ಹಚ್ಚಿದರೆ ಸುಟ್ಟಷ್ಟು ಉರಿ, ನೋವಾಗುತ್ತದೆಂಬುದು ಏಕನಾಥರಿಗೆ ಗೊತ್ತಿತ್ತು. ವೈದ್ಯರು ಟಿಂಕ್ಚರ್ ಶೀಶೆ ಹಿಡಿದು ಹತ್ತಿರ ಬಂದರು.

ಏಕನಾಥರು ಭಯದಿಂದ ಗಟ್ಟಿಯಾಗಿ ಕಣ್ಣುಮುಚ್ಚಿಕೊಂಡರು. ಇದ್ದಕ್ಕಿದ್ದಂತೆ ಗಾಯದ ಮೇಲೆ ಸುಡುವ ಕೆಂಡವನ್ನಿಟ್ಟಷ್ಟು ನೋವಾಯಿತು. ‘ಅಯ್ಯೋ ಅಯ್ಯೋ’ ಎಂದು ಒಂದೇ ಸಮನೆ ಗಟ್ಟಿಯಾಗಿ ಕಿರುಚಿಕೊಂಡರು.

ಕೊಂಚ ಹೊತ್ತಿನ ನಂತರ ಕಣ್ತೆರೆದು ನೋಡಿದರೆ, ವೈದ್ಯರು ನಗು ನಗುತ್ತಾ ಅಲ್ಲೇ ನಿಂತಿದ್ದರು. ‘ತುಂಬ ನೋವಾಯಿತಾ? ಅಷ್ಟು ಗಟ್ಟಿಯಾಗಿ ಕಿರುಚಿಕೊಂಡೆಯಲ್ಲಾ?’ ಎಂದು ಕೇಳಿದರು.

ಏಕನಾಥರು ‘ಹೌದು ಹೌದು’ ಎಂದರು. ಆಗ ವೈದ್ಯರು ಕೈ ಯಲ್ಲಿದ್ದ ಬಾಟಲನ್ನೆತ್ತಿ ತೋರಿಸಿ ‘ನಾನಿದರ ಮುಚ್ಚಳವನ್ನೇ ಇನ್ನೂ ತೆಗೆದಿಲ್ಲ! ಟಿಂಕ್ಚರ್ ಹಚ್ಚಿಲ್ಲ. ಆದರೂ ನಿನಗೆ ನೋವು ಹೇಗಾಯಿತು? ಇದು ನಿನ್ನ ಮನಸ್ಸಿನಲ್ಲಿರುವ ಹೆದರಿಕೆ.

ಮನುಷ್ಯರ ಮನಸ್ಸೇ ಹಾಗೆ ವಿಚಿತ್ರ. ಹೆದರಬೇಡ. ನಿನಗೆ ಸಾಧ್ಯವಾದಷ್ಟೂ ಕಡಿಮೆ ನೋವಾಗುವ ಹಾಗೆ ಚಿಕಿತ್ಸೆ ಮಾಡುತ್ತೇನೆ’ ಎನ್ನುತ್ತಾ ಮಮತೆಯಿಂದ ತಲೆ ಸವರಿ ಟಿಂಕ್ಚರ್ ಹಚ್ಚಿದರು.

ಆಶ್ಚರ್ಯವೆಂದರೆ ಟಿಂಕ್ಚರ್ ಹಚ್ಚುವುದಕ್ಕೆ ಮುಂಚೆಯೇ ನೋವು- ನೋವೆಂದು ಕಿರುಚಿಕೊಂಡಿದ್ದ ಏಕನಾಥರಿಗೆ ನಿಜ ವಾಗಿಯೂ ಟಿಂಕ್ಚರ್ ಹಚ್ಚಿದಾಗ ಹೆಚ್ಚು ನೋವಾಗಲೇ ಇಲ್ಲ. ಅವರಿಗೆ ಅವರ ಮನಸ್ಸು ವಿಚಿತ್ರವೆನಿಸಿತಂತೆ!

ಎರಡನೆಯದ್ದು: ಏಕನಾಥರ ಪರಿಚಯದ ಒಬ್ಬ ವ್ಯಕ್ತಿಗೆ ಬೆಳ್ಳುಳ್ಳಿಯ ಅಲರ್ಜಿಯಿತ್ತು. ಅದನ್ನು ತಿಂದರೆ ಅವರಿಗೆ ನಡುಕ ಬರುತ್ತಿತ್ತು. ಮೈಮೇಲೆದದ್ದುಗಳು ಏಳುತ್ತಿದ್ದವು. ಒಮ್ಮೆ ಅವರು ಯಾರದ್ದೋ ಮನೆಗೆ ಉಪಾಹಾರಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ದೋಸೆ ಮತ್ತು ಚಟ್ನಿ ಬಡಿಸಲಾಯಿತು.

ತಿಂದಾದ ಮೇಲೆ ಅವರು ಸಜ್ಜನಿಕೆಯಿಂದ ‘ದೋಸೆ ತುಂಬಾ ರುಚಿಯಾಗಿತ್ತಮ್ಮ’ ಎಂದರು. ಮನೆಯ ಗೃಹಿಣಿ ‘ದೋಸೆಯೊಂದಿಗಿದ್ದ ಬೆಳ್ಳುಳ್ಳಿ ಚಟ್ನಿಯ ಬಗ್ಗೆ ನೀವೇನೂ ಹೇಳಲೇ ಇಲ್ಲ?’ ಎಂದರು. ತಕ್ಷಣ ಆ ವ್ಯಕ್ತಿ ‘ಅಯ್ಯೋ ನೀವು ಬಡಿಸಿದ್ದು ಬೆಳ್ಳುಳ್ಳಿ ಚಟ್ನಿಯೇ?’ ಎಂದರು.

ತಕ್ಷಣ ಅವರ ಮೈ ಥರಥರ ನಡುಗಲು ಶುರುವಾಯಿತು. ಒಂದೆರಡು ನಿಮಿಷಗಳಲ್ಲಿ ಅವರ ಮೈಮೇಲೆ ದಪ್ಪದಪ್ಪ ದದ್ದುಗಳೆದ್ದವು. ಎಲ್ಲರೂ ಗಾಬರಿಯಾಗಿ ವೈದ್ಯರನ್ನು ಕರೆಸಬೇಕೆನ್ನುವಷ್ಟರಲ್ಲಿ, ಅಡುಗೆಯವರು ಬಂದು ‘ಅಮ್ಮಾ, ಇವತ್ತು ಬೆಳ್ಳುಳ್ಳಿ ಸಿಗಲಿಲ್ಲ.

ಹಾಗಾಗಿ ಚಟ್ನಿಗೆ ಬೆಳ್ಳುಳ್ಳಿ ಹಾಕಿರಲಿಲ್ಲ. ಅದು ಕೊಬ್ಬರಿ ಚಟ್ನಿ’ ಎಂದರು. ಕೊಂಚ ಹೊತ್ತಿನಲ್ಲಿ ಅವರ ನಡುಗುವಿಕೆ ನಿಂತಿತು. ಮೈಮೇಲಿನದದ್ದುಗಳೂ ಮಾಯವಾದವು. ಅವರು ಮೊದಲಿನಂತೆ ಆದರು.

ಈಗ ಹೇಳಿ ಬೆಳ್ಳುಳ್ಳಿಯ ಅಲರ್ಜಿ ಇರುವುದು ಅವರ ಮೈಗೋ, ಮನಸ್ಸಿಗೋ? ಅರ್ಥಪೂರ್ಣವಾದ ಎರಡೂ ಘಟನೆಗಳನ್ನು ಹೇಳಿದ ಏಕನಾಥ್ ಈಶ್ವರನ್ ಅವರ ಪುಣ್ಯ ಸ್ಮರಣೆಗೆ ಪ್ರಣಾಮಗಳು.

ಇಂಥ ಘಟನೆಗಳು ನಮ್ಮ ಬದುಕಿನಲ್ಲೂ ಸಂಭವಿಸಿರಬಹುದಲ್ಲವೇ? ನಮಗೂ ನಮ್ಮ ಮನಸ್ಸೇ ಅರ್ಥವಾಗಿಲ್ಲದೇ ಹೋಗಿರಬಹುದಲ್ಲವೇ?

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ