ಬೆಂಗಳೂರು: ಪ್ರತಿ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿ ಪಾವತಿಸಲು ಸೋಮವಾರ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಚಾಮರಾಜಪೇಟೆಯ ಶಂಕರಮಠದಲ್ಲಿ ಮಂಗಳವಾರ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹಮ್ಮಿಕೊಂಡಿದ್ದ ಧನ್ವಂತರಿ ಯಾಗದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯದ ಹಣಕಾಸು ಸ್ಥಿತಿ ಅಷ್ಟಾಗಿ ಉತ್ತಮ ವಿಲ್ಲದೆ ಇದ್ದರೂ ರೈತರಿಗೆ ತೊಂದರೆ ಆಗದಂತೆ ಅವರ ಸಮಸ್ಯೆ ನೀಗಿಸಲು ಹಣ ಬಿಡುಗಡೆ ಮಾಡಲಾಗಿದೆ. ಇದರಿಂದ ಸುಮಾರು 50 ಲಕ್ಷ ರೈತರಿಗೆ ಪ್ರಯೋಜನವಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಕೂಡ ಪ್ರತಿ ರೈತನಿಗೆ ಎರಡು ಕಂತುಗಳಲ್ಲಿ ತಲಾ ಮೂರು ಸಾವಿರ ರೂಪಾಯಿಯಂತೆ ಒಟ್ಟು ಆರು ಸಾವಿರ ಮತ್ತು ರಾಜ್ಯ ಸರಕಾರ ಎರಡು ಸಾವಿರ ರೂಪಾಯಿಯಂತೆ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ಪಾವತಿಸುತ್ತಿದೆ. ಇದರಿಂದ ಪ್ರತಿ ರೈತನಿಗೂ ವರ್ಷಕ್ಕೆ ಹತ್ತು ಸಾವಿರ ರೂಪಾಯಿ ಸಿಗುತ್ತಿದೆ ಎಂದು ತಿಳಿಸಿದರು.