ಬೆಂಗಳೂರು: ಕೊರೊನಾ ಅಟ್ಟಹಾಸ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚಾಗುತ್ತಲೇ ಇದ್ದು, ಈ ನಡುವೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಹಾಸಿಗೆಗಳೆಲ್ಲ ಭರ್ತಿಯಾಗಿವೆ ಖಾಲಿ ಇಲ್ಲ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಹೀಗಾದರೆ ರೋಗಿಗಳು ಎಲ್ಲಿಗೆ ಹೋಗೋದು ಎಂಬ ಪ್ರಶ್ನೆ ಬೆಂಗಳೂರು ನಿವಾಸಿಗಳನ್ನು ಕಾಡುತ್ತಿದೆ. ಹೌದು! ನಮ್ಮ ರಾಜ್ಯ ಸಚಿವರು ನಮ್ಮಲ್ಲಿ ಕೊರೊನಾ ಸೋಂಕಿತರುನ್ನು ನೋಡಿಕೊಳ್ಳಲು ಎಲ್ಲರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ಭಯವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾರೆ. ಆದರೆ ವಾಸ್ತವದಲ್ಲಿ ಅಂತ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದು ತಿಳಿಯುತ್ತಿದೆ.
ಅಂದರೆ ಸಚಿವರು ಮತ್ತು ಮುಖ್ಯಮಂತ್ರಿಗಳು ಮಾತಿಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಯೇ ಅಥವಾ ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುವುದಿಲ್ಲ ಎಂಬ ಆಶಾಮನೋಭಾವವಿಟ್ಟುಕೊಂಡು ಹೇಳುತ್ತಿದ್ದಾರೆಯೇ ಎಂಬುವುದು ತಿಳಿಯುತ್ತಿಲ್ಲ.
ಇವರ ಹೇಳಿಕೆ ಬೆಂಗಳೂರು ನಿವಾಸಿಗಳನ್ನು ಬೆಚ್ಚಿ ಬೀಳಿಸುವ ವಿಷಯ. ಇನ್ನು ಗುರುವಾರ ಕಲಾಸಿಪಾಳ್ಯ ಪೊಲೀಸ್ ಠಾಣೆ ಕಾನ್ಸ್‌ಸ್ಟೆಬಲ್ ಒಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ದಾಖಲಿಸಲು ವಿಕ್ಟೋರಿಯಾಕ್ಕೆ ಕರೆ ತಂದಾಗ ಇಲ್ಲಿ ಬೆಡ್ ಖಾಲಿ ಎಂದು ರಾಜೀವ್‌ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇದರಿಂದ ಆತಂಕದ ಛಾಯೆ ರಾಜಧಾನಿಯ ನಿವಾಸಿಗಳನ್ನು ಆವರಿಸಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಕೊರೊನಾ ಸೋಂಕಿಗೆ ಒಳಗಾದವರನ್ನು ದಾಖಲಿಸಿಕೊಳ್ಳಲು ಬೇಕಾದಷ್ಟು ಬೆಡ್‌ಗಳ ವ್ಯವಸ್ಥೆಯನ್ನು ಬಿಬಿಎಂಪಿ ಮತ್ತು ಸರ್ಕಾರ ಮಾಡಿಕೊಳ್ಳದಿರುವುದು ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ.
ಇದೇ ರೀತಿ ಹಾಸಿಗೆ ವ್ಯವಸ್ಥೆಯಿಲ್ಲ ಎಂದು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಕೆಲಸವಾದರೆ ಸೋಂಕಿತರನ್ನು ಹೊತ್ತು ತಿರುಗುವ ಆಂಬುಲೆನ್ಸ್‌ಗಳ ಚಾಲಕರು ಮತ್ತು ಜತೆಗೆ ಹೋಗುವವರನ್ನು ಈ ಮಹಾಮಾರಿ ಸುತ್ತಿಕೊಳ್ಳಲಿದೆ.
ಹೀಗಾಗಿ ಇನ್ನಾದರೂ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಈ ಬಗ್ಗೆ ಎಚ್ಚೆತ್ತುಕೊಂಡು ಕೊರೊನಾ ರೋಗಿಗಳನ್ನು ದಾಖಲಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಜತೆಗೆ ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದೆ ಎಂಬುದನ್ನು ತಿಳಿದುಕೊಳ್ಳಲು ಸಂಪರ್ಕ ಸಾಧಿಸುವ ಅಗತ್ಯವಿದ್ದು, ಈ ಬಗ್ಗೆಯೂ ಹೆಚ್ಚು ಗಮನಕೊಡಬೇಕು. ಹೀಗಾದರೆ ರೋಗಿಯನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆಸುವುದು ತಪ್ಪುತ್ತದೆ.