ಬೆಂಗಳೂರು: ನಗರದ 13 ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಜತೆ ಸಂಪರ್ಕದಲ್ಲಿದ್ದ 420ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದ ವಿವಿ ಪುರ ಎಎಸ್‌ಐ ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಎರಡೂವರೆ ತಿಂಗಳು ಯಾವುದೇ ಸೋಂಕು ನಮ್ಮ ಸಿಬ್ಬಂದಿಯಲ್ಲಿ ಇರಲಿಲ್ಲ ಲಾಕ್ ಡೌನ್ ಸಡಿಲಗೊಂಡ ಬಳಿಕ ಜನದಟ್ಟಣೆ ಜಾಸ್ತಿಯಾಗಿದ್ದು, ಅಂತಾರಾಜ್ಯ ನಡುವಿನ ಸಂಚಾರವೂ ಹೆಚ್ಚಾಗಿದೆ. ಜತೆಗೆ ರಾಜ್ಯದಲ್ಲೂ ನಾಗರಿಕರ ಓಡಾಟ ಹೆಚ್ಚಾಗುತ್ತಿದೆ ಎಂದರು.
ಲಾಕ್ ಡೌನ್ ಸಡಿಲಿಕೆ ಬಳಿಕ ಆರೋಪಿಗಳ ಬಂಧನ, ನಿಯಂತ್ರಿತ ಪ್ರದೇಶದಲ್ಲಿ (ಕಂಟೈನ್ಮೆಂಟ್) ಭದ್ರತಾ ಕೆಲಸ ಮಾಡುವಾಗ, ಗಸ್ತು ತಿರುಗುವಾಗ ಪೊಲೀಸರಿಗೆ ಸೋಂಕು ತಗುಲುತ್ತಿದೆ ಎಂದು ಆದರೆ ಈ ಬಗ್ಗೆ ನಾವು ನಮ್ಮ ಸಿಬ್ಬಂದಿಗೆ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸುತ್ತಿದ್ದೇವೆ ಎಂದು ಹೇಳಿದರು.
ಕೊರೊನಾದಿಂದ ಮೃತಪಟ್ಟಿರುವ ಎಎಸ್‌ಐ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಅವರಿಗೆ ರಜೆ ಕೂಡ ನೀಡಲಾಗಿತ್ತು. ಕರ್ತವ್ಯದಲ್ಲಿದ್ದಾಗ ಅವರಿಗೆ ಸೋಂಕು ತಗುಲಿಲ್ಲ. ಹೊರಗಡೆ ಇದ್ದಾಗ ಸೋಂಕು ತಗುಲಿದೆ ಎಂದು ಆಯುಕ್ತರು ತಿಳಿಸಿದರು.
ಪ್ರತಿಯೊಬ್ಬ ಪೊಲೀಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಬಳಕೆ ಮಾಡಬೇಕು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ, ಧೈರ್ಯದಿಂದ ಕೆಲಸ ಮಾಡಿ ಎಂದು ಪೊಲೀಸರಿಗೆ ಸಲಹೆ ನೀಡಿದರು.