ಬೆಂಗಳೂರು: ಕೊರೊನಾ ಸೋಂಕು ನಗರ-ಪಟ್ಟಣಗಳಿಂದ ಹಳ್ಳಿಗಳಿಗೆ ಹರಡಿದೆ. ಆದರೂ ಕಳೆದ 15 ದಿನಗಳಿಂದ ಪರೀಕ್ಷೆ ಮಾಡುವ ಪ್ರಮಾಣ 16 ಸಾವಿರದಿಂದ ಸರಾಸರಿ 11000ಕ್ಕೆ ಇಳಿದಿದೆ. ಸೋಂಕು ಸಮುದಾಯಕ್ಕೆ ವ್ಯಾಪಿಸಿಕೊಂಡಿರುವ ಭೀತಿ ಇದೆ. ಏನಾಗಿದೆ ಸರ್ಕಾರಕ್ಕೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯಕ್ಕೆ 9200 ವೆಂಟಿಲೇಟರ್ ಬೇಕಾಗಿದೆ, ಇರುವುದು 1500 ಮಾತ್ರ. ಕೇಂದ್ರ ಸರ್ಕಾರಕ್ಕೆ 33,000 ವೆಂಟಿಲೇಟರ್ ಕಳಿಸಲು ಕೇಳಿದರೆ ಬಂದಿರುವುದು 90 ಮಾತ್ರ. 20,000 ಆಕ್ಸಿಜನೇಟೆಡ್ ವೆಂಟಿಲೇಟರ್ ಬೇಕಾಗಿದ್ದು, ಕೇವಲ 7000 ಮಾತ್ರ ಇವೆ. ಇದೆನಾ ತಯಾರಿ ಎಂದು ರಾಜ್ಯ ಸರ್ಕಾರದ ಬೆವರಿಳಿಸಿದ್ದಾರೆ.
ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಂದಾಜು 3,300 ಕೋಟಿ ರೂ.ಗಳ ಅವ್ಯವಹಾರ ನಡೆದಿದ್ದು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಆರ್ಥಿಕ ಇಲಾಖೆ ಆಕ್ಷೇಪಿಸಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಸಿಎಂ ಬಿಎಸ್‌ವೈ ತಕ್ಷಣ ಶ್ವೇತಪತ್ರ ಹೊರಡಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಇದೇ ರೀತಿಯ ಉದಾಸೀನತೆ -ಉಡಾಫೆತನವನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ದಿಢೀರನೇ ಬಂದೆರಗಿಲ್ಲ, ಕಳೆದ ಮೂರು ತಿಂಗಳ ಅವಧಿಯನ್ನು ಕೇವಲ ಲಾಕ್‌ಡೌನ್ ಹೇರಿಕೆ ಮತ್ತು ಹಿಂತೆಗೆತದಲ್ಲಿ ವ್ಯರ್ಥವಾಗಿ ಕಳೆದ ಸರ್ಕಾರ, ಯಾವ ತಯಾರಿಯನ್ನೂ ನಡೆಸಿಲ್ಲ. ಈ ನಿಷ್ಕ್ರೀಯತೆಯ ಫಲವನ್ನು ರಾಜ್ಯದ ಜನತೆ ಅನುಭವಿಸಿದಂತಾಗಿದೆ ಎಂದು ಕಿಡಿ ಕಾರಿದ್ದಾರೆ.
ಮಾರ್ಚ್ 23ರಂದು ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿದಾಗ ರಾಜ್ಯದಲ್ಲಿ ಸಾವು ಸಂಭವಿಸಿರಲಿಲ್ಲ, 26 ಮಂದಿ ಸೋಂಕಿತರಷ್ಟೇ ಇದ್ದರು. ಇಂದಿನ ವರದಿಯ ಪ್ರಕಾರ ಸೋಂಕಿತರ ಸಂಖ್ಯೆ 11,923, ಸಾವಿನ ಸಂಖ್ಯೆ 191 ದಾಟಿದೆ. ಎಲ್ಲಿದೆ ನಿಯಂತ್ರಣ ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ವಿವರ ಕೇಳಿ ನಾನು ಹಲವಾರು ಪತ್ರಗಳನ್ನು ಬರೆದಿದ್ದರೂ ಸರ್ಕಾರ ಮಾಹಿತಿ ಕೊಡುತ್ತಿಲ್ಲ. ಮಾಹಿತಿ ನಿರಾಕರಣೆ ನನ್ನ ಹಕ್ಕುಚ್ಯುತಿಯಾಗುವುದು ಮಾತ್ರವಲ್ಲ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಬಂದಿರುವ ದುಡ್ಡು ಮತ್ತು ವೈದ್ಯಕೀಯ ಸಲಕರಣೆಗಳೆಷ್ಟು? ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳೆಷ್ಟು? ಯಾವ ಮಾನದಂಡದ ಆಧಾರದಲ್ಲಿ ಖಾಸಗಿ ಆಸ್ಪತ್ರೆಗಳ ಶುಲ್ಕ ನಿಗದಿಪಡಿಸಿದೆ? – ಈ ವಿವರಗಳನ್ನು ರಾಜ್ಯ ಸರ್ಕಾರ ಜನತೆಯ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.
Este helidru avru madode madodu bidi sir jana inna meladaru echettukolalli