ವಾಷಿಂಗ್ಟನ್: ಆನ್‌ಲೈನ್ ಸರ್ಚ್‌ಗಳು ಮತ್ತು ಜಾಹೀರಾತು ಮಾರುಕಟ್ಟೆಗಳನ್ನು ನಿಯಂತ್ರಿಸಲು ಅಕ್ರಮ ಮಾರ್ಗದಲ್ಲಿ ಹೋಗುತ್ತಿದೆ ಮತ್ತು ಪ್ರಾಬಲ್ಯ ಮೆರೆಯುತ್ತಿದೆ ಎಂಬ ಆರೋಪದಡಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಗೂಗಲ್ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಬಹುದೊಡ್ಡ ಆಂಟಿಟ್ರಸ್ಟ್ ಪ್ರಕರಣ ಹೂಡಿದೆ.
ಗೂಗಲ್ ವಿರುದ್ಧದ ದಾವೆಯಲ್ಲಿ 11 ಅಮೆರಿಕದ ರಾಜ್ಯಗಳು ಕೂಡ ನ್ಯಾಯಾಂಗ ಇಲಾಖೆಯೊಂದಿಗೆ ಕೈಜೋಡಿಸಿದ್ದು ಗೂಗಲ್ ನಡೆಯನ್ನು ತೀವ್ರವಾಗಿ ವಿರೋಧಿಸಿವೆ.
ಅಂತರ್ಜಾಲ ಕ್ಷೇತ್ರದಲ್ಲಿ ತನಗೆ ಮುಂದೆಯೂ ಪ್ರತಿಸ್ಪರ್ಧಿಗಳು ಯಾರೂ ಇಲ್ಲದಂತೆ ನೋಡಿಕೊಳ್ಳುವ ಉದ್ದೇಶದಿಂದ ತನ್ನ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಗೂಗಲ್ ಚಟುವಟಿಕೆಗಳನ್ನು ಪರಿಶೀಲನೆಗೆ ಒಳಪಡಿಸುತ್ತಿರುವುದಾಗಿ ಡೆಪ್ಯುಟಿ ಅಟಾರ್ನಿ ಜನರಲ್ ಜೆಫ್ ರೋಸೆನ್ ಹೇಳಿದ್ದಾರೆ.
ಗೂಗಲ್‌ನ ಜಾಹೀರಾತು ಉದ್ಯಮವನ್ನು ಇದು ಗುರಿಯಾಗಿರಿಸಿಕೊಂಡಿಲ್ಲ. ಆದರೆ ತನ್ನ ಸರ್ಚ್ ಇಂಜಿನ್ ಮೂಲಕ ಸರ್ಚ್ ಮತ್ತು ಜಾಹೀರಾತಿನ ತನ್ನ ಪಾತ್ರವನ್ನು ಮಹತ್ವವಾಗಿ ತೋರಿಸಿಕೊಳ್ಳುವ ನಿಟ್ಟಿನಲ್ಲಿ ಜನರನ್ನು ಒತ್ತಾಯಿಸುತ್ತಿದೆ ಎಂದು ಆರೋಪಿಸಿದೆ.
ನ್ಯಾಯಾಂಗ ಇಲಾಖೆಯ ಎಲ್ಲಾ ದೂರುಗಳನ್ನು ಗೂಗಲ್ ತಳ್ಳಿಹಾಕಿದೆ. ‘ನ್ಯಾಯಾಂಗ ಇಲಾಖೆ ಇಂದು ಹೂಡಿರುವ ದಾವೆ ಬಹಳ ಪೇಲವವಾಗಿದೆ. ಜನರು ಗೂಗಲ್‌ಅನ್ನು ಏಕೆ ಬಳಸುತ್ತಾರೆ ಎಂದರೆ ಅವರು ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ವಿನಾ ಅವರನ್ನು ಬಲವಂತ ಮಾಡುತ್ತಿದ್ದೇವೆ ಅಥವಾ ಅವರಿಗೆ ಪರ್ಯಾಯ ಆಯ್ಕೆ ಇದೆ ಎಂದಲ್ಲ’ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸಮರ್ಥನೆ ನೀಡಿದ್ದಾರೆ.
ಒಟ್ಟಾರೆ ಗೂಗಲ್ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆ ಹೂಡಿರುವ ಪ್ರಕರಣ ಯಾವಮಟ್ಟಕ್ಕೆ ತಲುಪುತ್ತದೋ ಎಂಬುವುದು ಕಾಲಕ್ರಮೇಣ ತಿಳಿಯಲಿದೆ.