ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕನ್ನಡ ಚಿತ್ರ ನಿರ್ಮಾಪಕ, ಸುದೀಪ್ ನಟನೆಯ ‘ರನ್ನ’ ಮತ್ತು ರವಿಚಂದ್ರನ್ ನಟನೆಯ ಅಣ್ಣಯ್ಯ ಸಿನಿಮಾ ಖ್ಯಾತಿಯ ನಿರ್ಮಾಪಕ ಎಂ. ಚಂದ್ರಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ.
ಕೋವಿಡ್ನಿಂದ ಬಳಲಿದ್ದ ಅವರು, ಕೆಲ ದಿನಗಳ ಹಿಂದಷ್ಟೇ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಪುತ್ರನನ್ನು ಅಗಲಿದ್ದಾರೆ.
ನಿಮಿಷಾಂಬ ಪ್ರೊಡಕ್ಷನ್ ನ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್ ನ ಅನ್ನದಾತನನ್ನು ಈಗ ಕೊರೊನಾ ಬಲಿ ಪಡೆದಿದೆ.
ಕಳೆದ 23 ದಿನಗಳ ಹಿಂದೆ ಚಂದ್ರಶೇಖರ್ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ನಂತರ ಮಣಿಪಾಲ್ ಸೆಂಟರ್ಗೆ ದಾಖಲಾಗಿದ್ದರು. ಬಳಿಕ ಕೋವಿಡ್ ನಿಂದ ಗುಣಮುಖರಾಗಿದ್ದಾದರೂ ಶ್ವಾಸಕೋಶ ಸಮಸ್ಯೆ ಉಲ್ಬಣಗೊಂಡು ಇಂದು (ಏಪ್ರಿಲ್ 29) ಕೊನೆಯುಸಿರೆಳೆದಿದ್ದಾರೆ.
ನಿರ್ಮಾಪಕ ಚಂದ್ರಶೇಖರ್ ಇತ್ತೀಚೆಗಷ್ಟೆ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದ ಉಪೇಂದ್ರ ನಟನೆಯ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು.
ಮೊನ್ನೆ ಕೋಟಿ ರಾಮು ವರನ್ನು ಕಳೆದುಕೊಂಡಿದ್ದ ಸ್ಯಾಂಡಲ್ ವುಡ್ ಇಂದು ಮತ್ತೊಬ್ಬ ನಿರ್ಮಾಪಕನನ್ನು ಕಳೆದುಕೊಂಡಿದೆ. ಇದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.