ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ತಿ.ನರಸೀಪುರ ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಐದಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಅಷ್ಟೇ ಅಲ್ಲ ಈ ಗ್ರಾಮ ಎಂದರೆ ತಾಲೂಕು ಆಡಳಿತ ಸೇರಿ ಎಲ್ಲಾ ಅಧಿಕಾರಿಗಳು, ಗ್ರಾಮಸ್ಥರು ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಕೆಲವರು ಕಾಶಿಯಾತ್ರೆಗೆ ಹೋಗಿ ಬಂದ ನಂತರ ಆರಂಭವಾದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ದಿನಕ್ಕೆ 30-40 ಸಂಖ್ಯೆಯಲ್ಲಿ ಸೋಂಕು ಹರಡಿ ಇಡೀ ಗ್ರಾಮವನ್ನು ಆವರಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮಕ್ಕೆ ಅಧಿಕಾರಿಗಳು ಬರಲು ಹಿಂದೆಟು ಹಾಕುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.
ಕಳೆದ 15 ದಿನಗಳಿಂದ ಈಚೆಗೆ ನಾಲ್ಕರಿಂದ ಐದು ಮಂದಿ ಸೋಂಕಿತರು ಮೃತಪಟ್ಟಿದ್ದು ಶವ ಸಂಸ್ಕಾರಕ್ಕೆ ಯಾರೊಬ್ಬರೂ ಮುಂದೆ ಬರುತ್ತಿಲ್ಲವಾದ್ದರಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ತಾಲೂಕು ಆಡಳಿತ ಗ್ರಾಮದ ಬಗ್ಗೆ ನಿರ್ಲಕ್ಷ ಮನೋಭಾವನೆ ತಳೆದಿರುವುದರಿಂದ ಕೊರೊನಾದಿಂದ ಸಾವಿಗೀಡಾದವರ ಅಂತ್ಯಕ್ರಿಯೆ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಕೆಲ ಕೆಲದಿನಗಳ ಹಿಂದೆ ಮಹಿಳೆಯೊಬ್ಬರು ಮೃತರಾಗಿ ಅವರ ಹೆಣ ಸಾಗಿಸಲು ತಾಲೂಕು ಆಡಳಿತ ಮುಂದೆ ಬಾರದೆ ಬೇಜವಾಬ್ದಾರಿ ತಳೆದಿದ್ದು, ಮೃತರ ಸಂಬಂಧಿಕರು ಬಾಡಿ ಪಡೆಯಲು ಮುಂದೆ ಬಾರದ್ದರಿಂದ ಗ್ರಾಮದ ಮುಖಂಡರು ಸೇರಿ ಮೈಸೂರಿನಿಂದ ಆಂಬುಲೆನ್ಸ್ ಕರೆಸಿ ವಿಜಯನಗರದ ಚಿತಾಗಾರಕ್ಕೆ ಮೃತದೇಹ ಕಳುಹಿಸಿಕೊಟ್ಟಿದ್ದರು.
ಒಟ್ಟಾರೆ ಕೊಡಗಹಳ್ಳಿ ಗ್ರಾಮದಲ್ಲಿ ಕೊರೊನಾ ಸರವೇಗದಲ್ಲಿ ಆವರಿಸುತ್ತಿರುವುದರಿಂದ ಅಧಿಕಾರಿ ವರ್ಗ, ಪೊಲೀಸ್ ಇಲಾಖೆ, ಅಷ್ಟೇ ಏಕೆ ಶಾಸಕರು ಸೇರಿದಂತೆ ಜಿಲ್ಲಾಡಳಿತವು ಗ್ರಾಮದ ಕಡೆ ತಿರುಗಿ ನೋಡುತ್ತಿಲ್ಲ. ಇದರಿಂದ ಈಗ ಕೊಡಗಹಳ್ಳಿ ಶಾಪಗ್ರಸ್ಥ ಗ್ರಾಮವಾಗಿ ಹೊರಹೊಮ್ಮಿದೆ.
ಪಿಪಿಇ ಕಿಟ್ ಕೊಟ್ಟರೆ ನಾವೇ ಅಂತ್ಯಕ್ರಿಯೆ ಮಾಡುತ್ತೇವೆ ಎಂದ ಗ್ರಾಮಸ್ಥರು
ತಾಲೂಕು ಆಡಳಿತ ಕೊಡಗಹಳ್ಳಿ ಗ್ರಾಮವನ್ನು ಒಂದು ರೀತಿ ಮಲ ತಾಯಿಯಂತೆ ನೋಡುತ್ತಿದೆ. ಕೊರೊನಾದಿಂದ ಸಾವಿಗೀಡಾದವರ ಅಂತ್ಯಕ್ರಿಯೆ ಮಾಡಲು ಮುಂದೆ ಬರುತ್ತಿಲ್ಲ. ತಾಲೂಕು ಆಡಳಿತ ಅಂತ್ಯಕ್ರಿಯೆಗೆ ಬೇಕಾದ ಪಿಪಿಇ ಕಿಟ್ ಸೇರಿದಂತೆ ಇತರ ಸಾಧನಗಳನ್ನು ಕೊಟ್ಟರೆ ನಾವೇ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ಆದರೆ ಅದನ್ನು ನೀಡುತ್ತಿಲ್ಲ. ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್ ಟಿಸಿಪಿಆರ್ ಪರೀಕ್ಷೆ ಮಾಡುತ್ತಿಲ್ಲ.
ಇನ್ನು ಕೊರೊನಾ ಭಯದಿಂದ ಗ್ರಾಮಕ್ಕೆ ಬರಲು ಯಾರೂ ಸಿದ್ಧರಿಲ್ಲ. ಪಾಸಿಟಿವ್ ಬಂದವರನ್ನು ಎಲ್ಲಿಗೆ ಕರೆದೊಯ್ಯಬೇಕೆಂಬ ಮಾಹಿತಿ ಕೊಡುವವರಿಲ್ಲ. ಕೋವಿಡ್ ಟೆಸ್ಟ್ ಮಾಡಿಸಿದವರಿಗೆ ಪಾಸಿಟಿವ್ ಬರುತ್ತಿದೆ. ಇನ್ನು ಹೆಚ್ಚಿನ ಪರೀಕ್ಷೆ ಮಾಡಬೇಕಾದ ಅನಿವಾರ್ಯತೆ ಇದೆ. ಗ್ರಾಮದ ಮಕ್ಕಳು ಮತ್ತು ಹಲವಾರು ಮಂದಿಗೆ ಕೆಮ್ಮು, ಜ್ವರ ಇದೆ. ಆದರೆ ಅವರೆಲ್ಲ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ತಾಲೂಕು ಆಡಳಿತ ಹಿಂದೇಟು ಹಾಕುತ್ತಿದೆ ಎಂದು ಗ್ರಾಮದ ಪ್ರಮುಖರು ದೂರುತ್ತಿದ್ದಾರೆ.
ಇನ್ನಾದರೂ ಇತ್ತ ಸರ್ಕಾರ, ಜಿಲ್ಲಾಡಳಿತ ಗಮನಹರಿಸಿ ಸೂಕ್ತ ಚಿಕಿತ್ಸೆ ಕೊಡಬೇಕು. ಇಲ್ಲದಿದ್ದರೆ ಗ್ರಾಮವೆಲ್ಲ ಸ್ಮಶಾನವಾಗಲಿದೆ ಎಂಬ ಆತಂಕ ಎದುರಾಗಿದೆ. ಗ್ರಾಮದಲ್ಲಿ ಕೊರೊನಾ ಮಹಾಮಾರಿ ತಾಂಡವವಾಡುತ್ತಿದೆ ಎಂದು ತಿಳಿದ ಕೂಡಲೆ, ತಾಲೂಕು ಮತ್ತು ಜಿಲ್ಲಾಡಳಿತ ಜಾಗೃತಿ ಮೂಡಿಸಿ ಗ್ರಾಮಸ್ಥರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ನಿವಾರಿಸಲು ಮುಂದಾಗದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.