ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದೇಶ, ರಾಜ್ಯದಲ್ಲಿ ಸಾವಿನ ಮನೆಯಾಗಿರುವ ಕೊರೊನಾಕ್ಕೆ ಪತ್ರಕರ್ತರು ಹಾಗೂ ಅವರ ಕುಟುಂಬದವರೂ ಬಲಿಯಾಗುತ್ತಿರುವ ಸಂಖ್ಯೆ ಏನು ಕಡಿಮೆ ಇಲ್ಲ.
ಜನತೆಗೆ ಸುದ್ದಿ ಕೊಡುವ ಜವಾಬ್ದಾರಿ ಹೊತ್ತು ಕೆಲಸ ಮಾಡುವ ಪತ್ರಕರ್ತರ ಬದುಕು ಇದೀಗ ಆತಂಕದಲ್ಲಿದೆ. ಈ ಮಹಾರಮಾರಿಗೆ ಒಂದೇ ತಿಂಗಳಲ್ಲಿ 52ಕ್ಕೂ ಹೆಚ್ಚು ಪತ್ರಕರ್ತರು ಮೃತಪಟ್ಟಿದ್ದಾರೆ. ಜತೆಗೆ ಪತ್ರಕರ್ತರ ಕುಟುಂಬದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ನಡುವೆಯೂ ಪ್ರಾಣದ ಹಂಗು ತೊರೆದು ಪತ್ರಕರ್ತರು ಜಾಗೃತಿ ಮೂಡಿಸುತ್ತಿದ್ದಾರೆ. ಪತ್ರಿಕೆಗಳು, ದೃಶ್ಯ ಮಾಧ್ಯಮ, ಡಿಜಿಟಲ್ ಮಾಧ್ಯಮಗಳ ಮುಖಾಂತರ ಕೊರೊನಾದ ಕರಾಳತೆಯನ್ನು ಬಿಚ್ಚಿಡುವ ಮೂಲಕ ಜನರಲ್ಲಿ ಸೋಂಕಿನ ತೀವ್ರತೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮುಂದುವಸಿದ್ದಾರೆ.
ಒಂದೇ ತಿಂಗಳಲ್ಲಿ 52 ಮಂದಿ ಪತ್ರಕರ್ತರು ಕೊರೊನಾಕ್ಕೆ ಬಲಿಯಾಗಿದ್ದಾರೆ. ರಾಷ್ಟ್ರೀಯ ಮಾಧ್ಯಮ ಆಜ್ತಕ್ನ ಪತ್ರಕರ್ತ ರೋಹಿತ್ ಸರ್ದಾನಾ ಸೋಂಕಿನಿಂದ ಶುಕ್ರವಾರ ಅಸುನೀಗಿದ್ದಾರೆ. ಒಂದೇ ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತೆ ನೀಲಾಕ್ಷಿ ಭಟ್ಟಾಚಾರ್ಯ ಸೋಂಕಿನಿಂದಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಕನ್ನಡದ ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ತಾಯಿ-ತಂದೆ ಇಬ್ಬರೂ ಈ ಮಹಾಮಾರಿಗೆ ತುತ್ತಾಗಿ ಜೀವವನ್ನೇ ಕಳೆದುಕೊಡರು.
ಅರುಣ್ ಬಡಿಗೇರ ಅವರ ತಾಯಿ ಕಸ್ತೂರಮ್ಮ ಬಡಿಗೇರ ಅವರು ಮೂರು ದಿನಗಳ ಹಿಂದೆ ಕೊರೊನಾಗೆ ಬಲಿಯಾಗಿದ್ದರು. ಇದೀಗ ಅವರ ತಂದೆ 68 ವರ್ಷದ ಚಂದ್ರಶೇಖರ ಬಡಿಗೇರ ಅವರು ಶುಕ್ರವಾರ ಕೊರೋನಾಗೆ ಬಲಿಯಾಗಿದ್ದಾರೆ.
ಇನ್ನು ಒಂದು ಅಂದಾಜಿನ ಪ್ರಕಾರ ದಿನಕ್ಕೆ ಇಬ್ಬರಂತೆ ಪತ್ರಕರ್ತರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಏಪ್ರಿಲ್ 2020ರಿಂದ ಏಪ್ರಿಲ್ 2021 ರವರೆಗೆ ಬರೋಬ್ಬರಿ 101 ಪತ್ರಕರ್ತರು ಸಾವನ್ನಪ್ಪಿದ್ದಾರೆ. ಕಳೆದ 4 ತಿಂಗಳಲ್ಲಿ 56 ಪತ್ರಕರ್ತರು ರಾಜಧಾನಿ ದೆಹಲಿಯಲ್ಲಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲೂ ಅನೇಕ ಪತ್ರಕರ್ತರು ಸೊಂಕಿನಿಂದ ಬಳಲುತ್ತಿದ್ದಾರೆ. ಅವರೆಲ್ಲರೂ ಆರೋಗ್ಯವಾಗಲಿ ಎಂಬುದು ನಮ್ಮ ಆಶಯ. ಇನ್ನು ಕೊರೊನಾ ವಾರಿಯರ್ಸ್ ಆಗಿರುವ ಪತ್ರಕರ್ತರಿಗೆ ಇದುವರೆಗೆ ಸರಕಾರ ಅಲ್ಪ ಮಟ್ಟದ ಸೌಲಭ್ಯ ಕೂಡ ನೀಡಿಲ್ಲ. ಈ ಬಗ್ಗೆಯೂ ಸರಕಾರ ಗಮನಿಸಬೇಕಿದೆ.