ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಾದ್ಯಂತ ಕೊರೊನಾ ಸೋಂಕಿನ ಎರಡನೇ ಅಲೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್, ಔಷಧ, ಆಕ್ಸಿಜನ್, ಆಂಬುಲೆನ್ಸ್ ಇತ್ಯಾದಿ ಸೌಲಭ್ಯಗಳು ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇದು ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯ ದೊಡ್ಡ ವೈಫಲ್ಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದ್ದಾರೆ.
ಇದು ನಗರದ ಪಕ್ಷದ ಕಚೇರಿಯಲ್ಲಿ ಆಯಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಆದರೆ ಈ ಒಟ್ಟಾರೆ ಪ್ರಕ್ರಿಯೆ ಅನೇಕ ನಿರ್ವಹಣಾ ವೈಫಲ್ಯಗಳಿಂದ ಕೂಡಿದೆ. ರಾಜ್ಯ ಮತ್ತು ಕೇಂದ್ರ ಎರಡೂ ಸರಕಾರಗಳೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಸಮರ್ಪಕವಾಗಿ ನಿರ್ವಹಿಸಲು ಸೋತಿದೆ ಎಂದರು.
ಭಾರತ ಇಂದು ಕೊರೊನಾ ಲಸಿಕೆಯ ಅಭಾವಕ್ಕೆ ಒಳಗಾಗಿದೆ. ನಮ್ಮ ದೇಶದ ಜನತೆಗೇ ಇಂದು ಲಸಿಕೆಗಳು ಸಿಗುತ್ತಿಲ್ಲ. ಆದರೆ ಕೇಂದ್ರ ಸರಕಾರ ಇತರ ದೇಶಗಳಿಗೆ ರಪ್ತು ಮಾಡುತ್ತಿದೆ. ಇಲ್ಲಿ ಜನಸಾಮಾನ್ಯರು ಲಸಿಕೆ ಸಿಗದೆ ಪರದಾಡತ್ತಿದ್ದಾರೆ.
ಕೇಂದ್ರ ಸರಕಾರ ಸ್ಪುಟ್ನಿಕ್ ಎಂಬ ಲಸಿಕೆಯನ್ನು ಖರೀದಿಸಲು ಹೊರಟಿದೆ. ಆದರೆ ಅದರ ಒಂದು ಡೋಸ್ ನ ಅಂತಾರಾಷ್ಟ್ರೀಯ ಬೆಲೆ 10ಡಾಲರ್, ಅಂದರೆ 750 ರೂಪಾಯಿ! ಕೇಂದ್ರ ಸರಕಾರ ರಾಜ್ಯಕ್ಕೆ ಪ್ರತೀ ಡೋಸ್ ಗೆ 300 ರೂಪಾಯಿ ಮಾಡಿದೆ. ಕೇಂದ್ರ ಸರಕಾರ ಪ್ರತೀ ಡೋಸ್ ಗೆ 150 ರೂಪಾಯಿ ಖರೀದಿ ಬೆಲೆ ನಿಗದಿಪಡಿಸಿದೆ. ಒಂದೇ ಲಸಿಕೆಗೆ ದೇಶದಲ್ಲಿ ಎರಡು ಬೆಲೆ ಇರಲು ಹೇಗೆ ಸಾಧ್ಯ? ಸದ್ಯದ ಆರ್ಥಿಕ ಸಂಕಷ್ಟದಲ್ಲಿ ಇಷ್ಟು ಬೆಲೆಗೆ ಒಬ್ಬ ಸಾಮಾನ್ಯನಿಗೆ ಎರಡು ಡೋಸ್ ಹಾಕಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ 93 ಲಕ್ಷ ಡೋಸ್ ಗಳನ್ನು ನಾಲ್ಕು ತಿಂಗಳಲ್ಲಿ ಕೊಡಲಾಗಿದೆ. ಇಷ್ಟು ಮಾತ್ರ ನೀಡುವ ಸಾಮರ್ಥ್ಯ ರಾಜ್ಯ ಸರಕಾರಕ್ಕೆ ಇದ್ದಲ್ಲಿ ರಾಜ್ಯದ ಏಳು ಕೋಟಿ ಜನಸಂಖ್ಯೆಗೆ ಲಸಿಕೆ ನೀಡಲು ಕನಿಷ್ಠ ಐದು ವರ್ಷಗಳು ಬೇಕು. ಹೀಗೆ ನಡೆದಲ್ಲಿ ಹೇಗೆ ಸೋಂಕು ನಿಯಂತ್ರಿಸಲು ಹೇಗೆ ಸಾಧ್ಯ? ಇದು ರಾಜ್ಯ ಸರಕಾರದ ಆರೋಗ್ಯ ವ್ಯವಸ್ಥೆಯ ಸಂಪೂರ್ಣ ವಿಫಲವಾಗಿದೆ ಎಂದರು.
ರಾಜ್ಯ ಸರಕಾರ ಕೇವಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಲಸಿಕೆ ನೀಡಬೇಕು. ಆಮ್ ಆದ್ಮಿ ಪಾರ್ಟಿಯ ದೆಹಲಿ ಸರಕಾರ ಈಗಾಗಲೇ ಉಚಿತ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದೆ. ಕರ್ನಾಟಕ ಸರಕಾರವೂ ಉಚಿತ ಲಸಿಕೆ ನೀಡಿ ಆರ್ಥಿಕವಾಗಿ ಕುಗ್ಗಿರುವ ಜನತೆಯನ್ನು ರಕ್ಷಿಸಬೇಕು. ಉಚಿತ ಆರೋಗ್ಯ ಸೇವೆ ರಾಜ್ಯ ಸರಕಾರದ ಕರ್ತವ್ಯ ಮತ್ತು ಜನತೆಯ ಹಕ್ಕು ಎಂದರು.