ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ ಡ್ರಗ್ಸ್ ವಿಚಾರದಲ್ಲಿ ನಟಿಯರ ಹೆಸರು ಮಾತ್ರ ಕೇಳಿ ಬಂದ ಹಿನ್ನೆಲೆಯಲ್ಲಿ ನಟಿ ಪಾರೂಲ್ ಯಾದವ್ ಕಿಡಿಕಾರಿದ್ದಾರೆ.
ಮಾದಕ ವಸ್ತುಗಳ ವಿರುದ್ಧ ನಾನು ಸೇರಿದಂತೆ ಎಲ್ಲರೂ ಹೋರಾಡಬೇಕು. ಆದರೆ ಭಾರತದಲ್ಲಿ ಡ್ರಗ್ಸ್ ಮಾರಾಟಗಾರರು ಅಥವಾ ಬಳಕೆದಾರರು ಕೇವಲ ಮೂವರು ಮಹಿಳೆಯರು ಮಾತ್ರನಾ?, ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ವಾ?” ಎಂದು ಪ್ರಶ್ನೆ ಮಾಡಿದ್ದಾರೆ.
ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ಮಾಡಿ, ಬಂಧಿಸಲಾಗಿತ್ತು. ಮಂಗಳವಾರ ನಟಿ ಸಂಜನಾ ಮನೆ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದುವರೆಗೂ ಡ್ರಗ್ಸ್ ವಿಚಾರದಲ್ಲಿ ಸ್ಯಾಂಡಲ್‍ವುಡ್‍ನ ಈ ಇಬ್ಬರು ನಟಿಯರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಾರೂಲ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಯಾವ ಕಾರ್ಪೋರೇಟರ್ ಸಿಬ್ಬಂದಿ, ವ್ಯಾಪಾರಸ್ಥರು, ಕ್ರೀಡಾಪಟುಗಳು ಅಥವಾ ನಟರೂ ಡ್ರಗ್ಸ್ ಧಂದೆಯಲ್ಲಿ ಭಾಗಿಯಾಗಿಲ್ವಾ? ನಾವು ಲಿಂಗ ಸಮಾನತೆಯ ಹೋರಾಟವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸಬೇಕಾ? ಅಥವಾ ನಮ್ಮಲ್ಲಿ ಕೆಲವರನ್ನು ಮಾತ್ರ ಬೇಟೆಯಾಡುವುದು ಎಷ್ಟು ಸುಲಭ ಎಂದು ನಾವು ಅಳಬೇಕೇ ಎಂದು ಡ್ರಗ್ಸ್ ದಂಧೆ ಬಗ್ಗೆ ನಟಿ ಪಾರುಲ್ ಯಾದವ್ ಪ್ರಶ್ನಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ವಿರುದ್ಧ ಕಳೆದ ವಾರ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಕ್ಕಾಗಿ ಕಾಯುತ್ತಿದ್ದರು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹಲವು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿ ಶೆಟ್ಟಿ ಕಂಪನಿಯಲ್ಲಿ ಸಂಜನಾ ಸಹ ಪಾಲುದಾರೆ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರ ನಡುವೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ದಾಖಲೆಗಳನ್ನು ಕೆದಕಿದಾಗ ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಿದ ಬಗ್ಗೆ ಮಾಹಿತಿ ಸಿಕ್ಕಿದೆ.
ಮೊದಲಿಗೆ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ನಟಿ ರಾಗಿಣಿಯನ್ನು ಬಂಧಿಸಲಾಗಿತ್ತು. ನಂತರ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆದಿತ್ತು. ಈ ವೇಳೆ 10 ದಿನ ನಮ್ಮ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಸಿಸಿಬಿ ವಕೀಲರ ವಾದವನ್ನು ಆಲಿಸಿದ ಬಳಿಕ ನ್ಯಾ.ಜಗದೀಶ್ ಅವರು 5 ದಿನ ಕಸ್ಟಡಿಗೆ ನೀಡಿದ್ದಾರೆ. ಹೀಗಾಗಿ ಕೋರ್ಟ್ ಆದೇಶದ ಅನ್ವಯ ಶುಕ್ರವಾರದವರೆಗೂ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ.
ಇನ್ನೂ ನಟಿ ಸಂಜನಾ ಆಪ್ತ ರಾಹುಲ್ ಹೇಳಿಕೆಯಿಂದಾಗಿ ಮಂಗಳವಾರ ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ಮಾಡಿದ್ದರು. ಹಲವು ಗಂಟೆ ಶೋಧ ಕಾರ್ಯ ನಡೆಸಿ, ಸಂಜನಾ ಅವರನ್ನು ಅರೆಸ್ಟ್ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಸಂಜನಾರನ್ನು ಎ-14 ಎಂದು ಉಲ್ಲೇಖಿಸಲಾಗಿದೆ. ಡ್ರಗ್ ಮಾಫಿಯಾ ಜತೆ ನಂಟಿರುವ ಅನುಮಾನದ ಮೇಲೆ ತೀವ್ರ ವಿಚಾರಣೆ ನಡೆಸಲಾಗಿದೆ. ಮೆಡಿಕಲ್ ಚೆಕಪ್ ಬಳಿಕ ವಸಂತನಗರದ ಸ್ಪೆಷಲ್ ರಿಮ್ಯಾಂಡ್ ಕೋರ್ಟ್ ಗೆ ಹಾಜರುಪಡಿಸಿ ಸಂಜನಾ ಅವರನ್ನು ಐದು ದಿನ ಕಸ್ಟಡಿಗೆ ಪಡೆದುಕೊಂಡಿದೆ.
no one else – no corporate execs, business people, sportspeople or even male actors is doing/ dealing drugs… should we celebrate winning the gender equality fight or should we cry at how easy it is to prey on some of us..@narcoticsbureau #Drugsmafia #NCB #SandalwoodDrugMafia
— Parul Yadav (@TheParulYadav) September 8, 2020