ಕಾನ್ಪುರ: ರೌಡಿ ಶೀಟರ್ ಒಬ್ಬನನ್ನು ಹುಡಿಕೊಂಡುಹೋದ ಡಿವೈಎಸ್ಪಿ ಸೇರಿದಂತೆ ಎಂಟು ಮಂದಿ ಪೊಲೀಸರನ್ನು ರೌಡಿಗಳು ಗುಂಡಿಗೆ ಬಲಿಯಾಗಿದ್ದು, ಏಳುಮಂದಿ ಪೊಲೀಸರು ಗಾಯಗೊಂಡಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ರೌಡಿ ಶೀಟರ್ ವಿಕಾಸ್ ದುಬೆ ಎಂಬಾತನನ್ನು ಪತ್ತೆಹಚ್ಚಲು ಪೊಲೀಸರು ತೆರಳಿದ್ದರು. ಈ ವೇಳೆ ರೌಡಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಉಪ ಸಬ್ ಇನ್ಸ್ ಪೆಕ್ಟರ್ ದೇವೇಂದ್ರ ಮಿಶ್ರಾ ಸೇರಿದಂತೆ 8 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾಋ.
ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ಕಾನ್ಪುರದ ಚೌಬೆಪುರ್ನ ಬಿತೂರ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಇತರ 7 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಈ ದಾಳಿ ಸಮಯದಲ್ಲಿ ಸ್ಥಳದಲ್ಲಿ ಎಎಸ್ಪಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿದ್ದು, ವಿಧಿ ವಿಜ್ಞಾನ ತಂಡದವರು ಪ್ರದೇಶವನ್ನು ತಪಾಸಣೆ ನಡೆಸಿದ್ದಾರೆ. ದಾಳಿಯಲ್ಲಿ ಒಬ್ಬರು ಡಿವೈಎಸ್ಪಿ, ಮೂವರು ಸಬ್ ಇನ್ಸ್ ಪೆಕ್ಟರ್ ಮತ್ತು ನಾಲ್ವರು ಕಾನ್ಸ್ಟೆಬಲ್ ಗಳು ಹುತಾತ್ಮರಾಗಿದ್ದಾರೆ.
ಹುತಾತ್ಮ ಪೊಲೀಸರನ್ನು ಸಿಒ ದೇವೇಂದ್ರ ಕುಮಾರ್ ಮಿಶ್ರಾ, ಎಸ್ಒ ಮಹೇಶ್ ಯಾದವ್, ಚೌಕಿ ಉಸ್ತುವಾರಿ ಅನೂಪ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ನೆಬುಲಾಲ್, ಕಾನ್ಸ್ಟೆಬಲ್ ಸುಲ್ತಾನ್ ಸಿಂಗ್, ರಾಹುಲ್, ಜಿತೇಂದ್ರ ಮತ್ತು ಬಬ್ಲು ಎಂದು ಗುರುತಿಸಲಾಗಿದೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಎಎಸ್ಪಿ ಮಾಹಿತಿ ನೀಡಿದ್ದಾರೆ.
ಡಿಜಿಪಿಯಿಂದ ವರದಿ ಕೇಳಿದ ಸಿಎಂ ಯೋಗಿ ಆದಿತ್ಯನಾಥ್
ಕಾನ್ಪುರದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಕ್ರಿಮಿನಲ್ ಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿರುವ ಅವರು ಘಟನೆ ಬಗ್ಗೆ ಡಿಜಿಪಿ ಎಚ್.ಸಿ. ಅವಸ್ತಿ ಅವರಿಂದ ವರದಿ ಕೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಕಾನ್ಪುರ ವಲಯದ ಎಡಿಜಿ ಜೆ.ಎನ್. ಸಿಂಗ್, ಕೊಲೆ ಪ್ರಯತ್ನ ಆರೋಪದ ಮೇಲೆ ರೌಡಿಶೀಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಹೋಗಿದ್ದ ವೇಳೆ ರೌಡಿಗಳು ಅವಿತು ಕುಳಿತುಕೊಂಡು ಗುಂಡಿನ ದಾಳಿ ನಡೆಸಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಪ್ರತಿಕ್ರಿಯೆ ನೀಡಿ ರೌಡಿ ಶೀಟರ್ ವಿಕಾಸ್ ದುಬೆ ವಿರುದ್ಧ ಸೆಕ್ಷನ್ 307ರಡಿ ಕೇಸು ದಾಖಲಾಗಿತ್ತು. ಹೀಗಾಗಿ ಪೊಲೀಸರು ಮಧ್ಯ ರಾತ್ರಿ ಆತನನ್ನು ಹುಡುಕಿ ಬಂಧಿಸುವ ಕಾರ್ಯಕ್ಕೆ ಹೋಗಿದ್ದರು. ನಮ್ಮ ಪೊಲೀಸರು ಅಲ್ಲಿಗೆ ಹೋದಾಗ ಜೆಸಿಬಿ ನಿಲ್ಲಿಸಿ ರೌಡಿಗಳು ತಡೆದಿದ್ದರು. ಪೊಲೀಸರು ವಾಹನದಿಂದ ಇಳಿದ ತಕ್ಷಣವೇ ಗುಂಡಿನ ದಾಳಿ ನಡೆಸಿ ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ತಕ್ಷಣಕ್ಕೆ ಪ್ರತಿದಾಳಿ ನಡೆಸಿದರೂ ಅದು ಪ್ರಯೋಜನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.